ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್‌ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್‌

ಕೈವ್‌: ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಜೊತೆಗಿನ ವಾಗ್ವಾದದ ಬಳಿಕ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಲಂಡನ್‌ನಲ್ಲಿ ಯುಕೆ ಪ್ರಧಾನಿ ಕೀರ್‌ ಸ್ಟಾಮರ್‌ ನೇತೃತ್ವದಲ್ಲಿ ಭಾನುವಾರ ಭದ್ರತಾ ಶೃಂಗಸಭೆ ನಡೆಯಿತು. ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ 18 ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ರಷ್ಯಾ, ಉಕ್ರೇನ್‌ ನಡಿವಿನ ಯುದ್ಧ ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ಸಂಪೂರ್ಣ ಸಹಮತ ಹೊಂದಿರುವುದಾಗಿ ಬ್ರಿಟನ್‌ ಹಾಗೂ ಫ್ರಾನ್ಸ್‌ ದೇಶಗಳು ಹೇಳಿದವು. ಅಲ್ಲದೇ ಇದರ ಬಗ್ಗೆ ಉಕ್ರೇನ್‌ ನಾಯಕರೊಂದಿಗೆ ಮಾತನಾಡುವುದಾಗಿ ಉಭಯ ನಾಯಕರು ಹೇಳಿದ್ದಾರೆ.

ಲಂಡನ್‌ನಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಝಲೆನ್ಸ್ಕಿ ವಿಡಿಯೋವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾ ವಿರುದ್ಧ ಯುದ್ಧದಲ್ಲಿ ಅಮೆರಿಕ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಸಾಧ್ಯವಿಲ್ಲ – ಟ್ರಂಪ್‌ಗೆ ಝಲೆನ್ಸ್ಕಿ ಖಡಕ್‌ ಪ್ರತಿಕ್ರಿಯೆ

ಅಮೆರಿಕದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ನೀಡಿದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸದ ಒಂದೂ ದಿನವೂ ಇಲ್ಲ. ಅಮೆರಿಕದೊಂದಿಗೆ ಮತ್ತೆ ಒಟ್ಟಾಗಿ ರಾಜತಾಂತ್ರಿಕ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಶಾಂತಿಗಾಗಿ ರಾಜತಾಂತ್ರಿಕತೆ ಇರಲಿದೆ. ನಾವೆಲ್ಲರೂ ಒಟ್ಟಾಗಿ ಇರುವುದಕ್ಕಾಗಿ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದೊಂದಿಗೆ ರಾಜತಾಂತ್ರಿಕತೆ ಇರಲಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದೇಕೆ?
ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೊಲೊಡಿಮಿರ್ ಝೆಲೆನ್ಸ್ಕಿ, ಟ್ರಂಪ್‌ ಜೊತೆಗೆ ಮಾತುಕತೆ ನಡೆಸಿದ್ದರು. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ಝಲೆನ್ಸ್ಕಿ, ನಾವು ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಲ್ಲದೇ ಪತ್ರಕರ್ತರ ಎದುರು ಈ ರೀತಿ ಮಾತನಾಡುವುದು ಶೋಭೆಯಲ್ಲ ಎಂದು ಟ್ರಂಪ್‌ಗೆ ಹೇಳಿದ್ದರು. ಈ ವೇಳೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್‌, ಅಮೆರಿಕ ಮಾಡಿರುವ ಸಹಾಯವನ್ನು ಸ್ಮರಿಸಿ ಮಾತನಾಡಬೇಕು ಎಂದು ಬೇಸರ ಹೊರಹಾಕಿದ್ದರು. ಇಂದು ಈ ಬಗ್ಗೆ ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ.