ಉಡುಪಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿ-2, ಸರಿಗಮಪ ಆಡಿಷನ್

ಉಡುಪಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಉಡುಪಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು. ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮುಂಭಾಗದ ಮೈದಾನದಲ್ಲಿ ಈ ಆಡೀಷನ್ ನಡೆಯಿತು. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ದೀಕ್ಷಾ ರಾಮಕೃಷ್ಣ, ಹರ್ಷ ಮೈಸೂರು, ಧನುಶ್ ನೇತೃತ್ವದ ಟೀಂ ಪ್ರತಿಭೆಗಳನ್ನು ಆಯ್ಕೆ ಮಾಡಿದರು. ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು.

ಅಸಿಸ್ಟೆಂಟ್ ಪ್ರೋಗ್ರಾಂ ಪ್ರೊಡ್ಯೂಸರ್ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಳಗೆ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಜೀ ವಾಹಿನಿ ಮಾಡುತ್ತಿದೆ. ರಾಜ್ಯದ ಜನಕ್ಕೆ ಇದೊಂದು ಅವಕಾಶ. ಎಲ್ಲರೂ ಇದನ್ನು ಉಪಯೋಗ ಮಾಡಿಕೊಳ್ಳಬೇಕು. ಸಾವಿರಾರು ಮಂದಿ ಸಂಗೀತ ಕಲಿತಿರುತ್ತಾರೆ. ಆದರೆ ಅದಕ್ಕೆ ಸೂಕ್ತವಾದ ಒಂದು ವೇದಿಕೆ ಸಿಕ್ಕಿರುವುದಿಲ್ಲ. ಜೀ ಕನ್ನಡ ವಾಹಿನಿ ಅಂತದ್ದೊಂದು ವೇದಿಕೆ ಪಡಿಸಿರುವಾಗ ಜನ ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

ಕಳೆದ ಬಾರಿ ಸರಿಗಮಪದ ಆಡಿಷನ್‍ನಲ್ಲಿ ಪಾಲ್ಗೊಂಡಿದ್ದೆ. ಎರಡನೇ ಸುತ್ತಿಗೆ ಹೋಗಿದ್ದೆ. ಈ ಬಾರಿ ಕೂಡಾ ಆಡೀಷನ್ ಕೊಟ್ಟಿದ್ದೇನೆ. ಅದೃಷ್ಟ ಇದ್ದರೆ ಆಯ್ಕೆಯಾಗುತ್ತೇನೆ. ತುಂಬಾ ಜನ ವಿದ್ಯಾರ್ಥಿಗಳು ಬಂದಿದ್ದಾರೆ. ಕಾಂಪಿಟೇಷನ್ ಟಫ್ ಆಗಿದೆ. ಆದ್ರೆ ಇಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ ಎಂದು ಉಡುಪಿಯ ಐಶ್ವರ್ಯ ಹೇಳಿದರು.

 

 

Comments

Leave a Reply

Your email address will not be published. Required fields are marked *