ಮನ್ಸೂರ್ ಖಾನ್‍ಗೆ ಸೂಕ್ತ ರಕ್ಷಣೆ ಖಂಡಿತ ಕೊಡ್ತೀವಿ – ಜಮೀರ್ ಅಹ್ಮದ್

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಜೀವ ಭಯದ ಬಗ್ಗೆ ಚಿಂತೆ ಮಾಡೋದು ಬೇಡ. ಅವರಿಗೆ ರಕ್ಷಣೆ ಕೊಡೋಕೆ ಪೊಲೀಸರು ಇದ್ದಾರೆ. ಕಾನೂನು ಕೂಡ ಇದೆ. ಸೂಕ್ತ ರಕ್ಷಣೆ ಖಂಡಿತವಾಗಿಯೂ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಭರವಸೆ ನೀಡಿದ್ದಾರೆ.

ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್ ಖಾನ್ ವಿಡಿಯೋದಲ್ಲಿ ತನ್ನ ಹೆಸರು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಾನು ಅಂದೇ ಮಾಧ್ಯಮಗಳಲ್ಲೆ ಮನ್ಸೂರ್ ಅವರಿಗೆ ಹೇಳಿದ್ದೆ. ದಯಮಾಡಿ ನೀವು ಬನ್ನಿ. ಯಾವ ರಾಜಕಾರಣಿಗಳಿಗೆ ದುಡ್ಡು ಕೊಟ್ಟಿದ್ದೀರ ಪಟ್ಟಿ ಮಾಡಿ ಹಣ ಪಡೆದು ಕಳೆದುಕೊಂಡವರಿಗೆ ವಾಪಸ್ ಕೊಡೋಣ ಅಂದಿದ್ದೆ. ನನ್ನ ಮಾತಿಗೆ ಟಿಕೆಯೂ ವ್ಯಕ್ತವಾಗಿತ್ತು. ಬೆಂಬಲವು ವ್ಯಕ್ತವಾಗಿತ್ತು ಎಂದು ಅವರು ಹೇಳಿದರು.

ನಾನು ಮತ್ತೊಮ್ಮೆ ಮನ್ಸೂರ್ ಖಾನ್ ಬಳಿ ಮನವಿ ಮಾಡುತ್ತೇನೆ. ಮನ್ಸೂರ್ ಖಾನ್, ನೀವು ಬನ್ನಿ ಬಡವರ ದುಡ್ಡು ವಾಪಸ್ ಕೊಡಿ ನಿಮ್ಮ ಜೊತೆ ನಾನು ಇದ್ದೇನೆ. ಸರ್ಕಾರ ಇರುವುದು ಬಡವರಿಗಾಗಿ ಶ್ರೀಮಂತರಿಗಾಗಿ ಅಲ್ಲ. ಬಡವರ ಪರವಾಗಿ ಒಬ್ಬ ಮಂತ್ರಿಯಾಗಿ ಮನ್ಸೂರ್ ಖಾನ್ ಅವರನ್ನ ಬನ್ನಿ ಎಂದು ಕರೆಯುವುದಾಗಿ ತಿಳಿಸಿದರು.

ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದೆ. ಮನ್ಸೂರ್ ಖಾನ್ ಬರಲಿ ಸತ್ಯ ಗೊತ್ತಾಗಲಿ. ಯಾವ ಯಾವ ರಾಜಕಾರಣಿಗೆ ಹಣ ಕೊಟ್ಟಿದಾರೆಂಬುದರ ಬಗ್ಗೆ ಪಟ್ಟಿ ಕೊಡಲಿ. ಸುಮ್ಮನೆ ಯಾರು ಕೂಡ ಆರೋಪ ಮಾಡಲು ಸಾಧ್ಯವಿಲ್ಲ. ಯಾರು ಯಾರಿಗೆ ಹಣ ಕೊಟ್ಟಿದ್ದಾರೆ. ಯಾವ ರಾಜಕಾರಣಿಗೆ ಎಷ್ಟು ಕೊಟ್ಟಿದ್ದಾರೆ ಹೇಳಲಿ. 2 ಸಾವಿರ ಕೋಟಿ ಹಣ ವಂಚನೆ ಆಗಿದೆ ಎನ್ನುವುದು ನನಗೆ ಸಿಕ್ಕಿದ ಮಾಹಿತಿ. ಆ ಹಣ ವಸೂಲಾಗಬೇಕು ಎಂದು ಅವರು ಒತ್ತಾಯಿಸಿದರು.

ದೇಶಪಾಂಡೆಯವರು, ರೋಶನ್ ಬೇಗ್ ಹೆಸರು ಹೇಳಿದ್ದಾರೆ. ಅದರ ಬಗ್ಗೆ ರೋಶನ್ ಬೇಗ್ ಮಾತಾಡಬೇಕು ಅಥವಾ ದೇಶಪಾಂಡೆಯವರು ಮಾತಾಡಬೇಕು ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಅವರು ತಿಳಿಸಿದರು.

Comments

Leave a Reply

Your email address will not be published. Required fields are marked *