ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಕೀರ್ ಮೂಸಾ ಫಿನಿಷ್

ಶ್ರೀನಗರ: ಜಮ್ಮು ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ, ‘ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ’ (ಐಎಸ್‍ಜೆಕೆ) ಉಗ್ರ ಸಂಘಟನೆಯ ಸ್ಥಾಪನೆ ಮಾಡಿದ್ದ ಭಯೋತ್ಪಾದಕ ಝಕೀರ್ ಮೂಸಾ ಸೇನೆಯ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಐಸಿಸ್ ನಿಂದ ಪ್ರಭಾವಿತನಾಗಿದ್ದ ಈತ 2017 ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಸೇರಿದ್ದ. ಆದರೆ ಆ ಬಳಿಕ ಅದನ್ನು ತೊರೆದು ತನ್ನದೇ ಐಎಸ್‍ಜೆಕೆ ಸಂಘಟನೆಯನ್ನ ಹುಟ್ಟುಹಾಕಿ ಭಯೋತ್ಪಾಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಭಾರತೀಯ ಸೇನಾ ಪಡೆ ಹತ್ಯೆ ಮಾಡಿದ್ದ ಮತ್ತೊಬ್ಬ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಈತ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ.

ಜಮ್ಮು ಕಾಶ್ಮೀರದ ತ್ರಾಲ್ ಬಳಿಕ ದಾಸ್ರಾ ಪ್ರದೇಶದಲ್ಲಿ ಗುರುವಾರ ರಾತ್ರಿ ಸೇನಾ ಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಝಕೀರ್ ಹತ್ಯೆಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಆತನ ಮೃತದೇಹವನ್ನು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿದ್ದ ಸ್ಫೋಟಕಗಳು ಹಾಗೂ ಗನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ರಾಜೇಶ್ ಕೈಲಾ ಮಾಹಿತಿ ನೀಡಿದ್ದಾರೆ.

ಉಗ್ರರು ದಾಸಾ ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದಾರೆ ಎಂಬ ಮಾಹಿತಿ ಪಡೆದ ಸೇನೆ, ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆತನಿಗೆ ಶರಣಾಗುವಂತೆ ಸೂಚನೆ ನೀಡಿದ್ದು ಕೂಡ ಆತ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದ, ಪತ್ರಿಯಾಗಿ ಯೋಧರು ನಡೆಸಿದ ದಾಳಿಯಲ್ಲಿ ಝಕೀರ್ ಸಾವನ್ನಪ್ಪಿದ್ದಾನೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆದ ಪರಿಣಾಮ ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರು ಎಸ್ಕೇಪ್ ಆಗದಂತೆ ಮಾಡಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಜಮ್ಮು ಕಾಶ್ಮೀರದ ತ್ರಾಲ್ ನೂರ್‍ಪುರ ನಿವಾಸಿಯಾಗಿದ್ದ ಝಕೀರ್ ಚಂಡೀಗಢದಲ್ಲಿ ಬಿ.ಟೆಕ್ ಪದವಿ ಶಿಕ್ಷಣ ಪಡೆಯುತ್ತಿದ್ದ. 2013ರಲ್ಲಿ ಶಿಕ್ಷಣ ಕೈಬಿಟ್ಟು ಉಗ್ರ ಸಂಘಟನೆ ಸೇರಿದ್ದ. ಬಳಿಕ ಐಸಿಸ್ ಚಿಂತನೆಗಳಿಂದ ಪ್ರಭಾವಿತನಾಗಿ ತನ್ನದೆ ಸಂಘಟನೆ ರೂಪಿಸಿದ್ದ. ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಹಲವು ಸಂಘರ್ಷಗಳನ್ನು ಈತ ನಡೆಸಿದ್ದ.

Comments

Leave a Reply

Your email address will not be published. Required fields are marked *