ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಫನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಯುವರಾಜ್ ಸಿಂಗ್, ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗೇಲ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕ್ರಿಸ್ ಗೇಲ್ ಹಿಂದಿ ಮಾತನಾಡಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಗೇಲ್ “ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ” ಎಂದು ಹಿಂದಿ ಡೈಲಾಗ್ ಹೇಳಿದ್ದಾರೆ.
https://twitter.com/YUVSTRONG12/status/1239111700659318786
ಕೇವಲ 17 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿರುವ ಯುವಿ, ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ, ಚೆನ್ನಾಗಿ ಹೇಳಿದ್ದೀರಾ ಕ್ರಿಸ್ ಗೇಲ್ ಕಾಕಾ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಕಾನ್ಫಿಡೆನ್ಸ್ ಮೇರಾ ಎಂದು ಸರಿಯಾಗಿ ಹೇಳುವ ಗೇಲ್, ಮುಂದಿನ ಪದವನ್ನು ಹೇಳಲು ಕಷ್ಟಪಡುತ್ತಾರೆ. ಯುವಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ ಯುವಿ, ಈಗ ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸದ್ಯ ಯುವರಾಜ್ ಸಿಂಗ್, ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ಪರವಾಗಿ ಆಡುತ್ತಿದ್ದಾರೆ. ಆದರೆ ಕೆಲ ಪಂದ್ಯಗಳು ಮಾತ್ರ ನಡೆದಿದ್ದ ಈ ಟೂರ್ನಿ ವಿಶ್ವದದ್ಯಾಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಒಂದು ದೈತ್ಯ ಪ್ರತಿಭೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುವ ಗೇಲ್, ಈ ಮಾದರಿಯ ಕ್ರಿಕೆಟ್‍ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಗೇಲ್ ಇಲ್ಲಿಯವರೆಗೆ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಇದರ ಜೊತೆಗೆ ಚುಟುಕು ಮಾದರಿ ಪಂದ್ಯದಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರನಾಗಿದ್ದು, ಗೇಲ್ ಇಲ್ಲಿಯವರೆಗೆ ಟಿ-20ಯಲ್ಲಿ 22 ಶತಕ ದಾಖಲಿಸಿದ್ದಾರೆ.
10 more to come!! https://t.co/EkvopFig20
— Chris Gayle (@henrygayle) March 15, 2020
ಈಗ ಗೇಲ್ ವಿವಿಧ ವಿದೇಶಿ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ. ಈಗ ಮುಂಬರುವ ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗೇಲ್ ಆಡಲಿದ್ದಾರೆ. ಐಪಿಎಲ್‍ನಲ್ಲಿ ಪಂಜಾಬ್ ತಂಡ ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕನ್ನಡಿಗ ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ಮುನ್ನೆಡೆಸುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಈ ಬಾರಿಯ ಐಪಿಎಲ್‍ಗೂ ಕೂಡ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ತಿಂಗಳ 29 ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದೂಡಲಾಗಿದೆ. ಜೊತೆಗೆ ದೆಹಲಿ ಸರ್ಕಾರ ನಮ್ಮ ರಾಜ್ಯದಲ್ಲಿ ಈಗ ಇರುವ ಪರಿಸ್ಥಿತಿಗೆ ಯಾವುದೇ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಬಿಸಿಸಿಐ ಜನರ ಆರೋಗ್ಯದ ಹಿತದೃಷ್ಠಿಯಿಂದ ಐಪಿಎಲ್ ಅನ್ನು ಮುಂದೂಡಿದೆ.

Leave a Reply