ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?

ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಶೀಘ್ರವೇ ಕಾಮೆಂಟೇಟರ್ ಆಗುತ್ತಾರಂತೆ. 2019ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್, ಇತ್ತೀಚೆಗೆ ಇನ್‍ಸ್ಟಾ ಲೈವ್‍ನಲ್ಲಿ ಮೊಹಮ್ಮದ್ ಕೈಫ್‍ರೊಂದಿಗೆ ಮಾತನಾಡುತ್ತಾ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ.

ಲೈವ್ ಸಂದರ್ಭದಲ್ಲಿ ಕಾಮೆಂಟೇಟರ್ ಆಗಿ ಬದಲಾಗುವ ಅವಕಾಶ ಇದೆಯಾ ಎಂದು ಕೈಫ್ ಪ್ರಶ್ನಿಸಿದ್ದರು. ಇದಕ್ಕೂತ್ತರಿಸಿದ ಯುವಿ, ಕಾಮೆಂಟರಿ ಬಾಕ್ಸ್ ನಲ್ಲಿ ಕೆಲವರ ವಾದಗಳನ್ನು ಕೆಳಲಾಗದ ಸ್ಥಿತಿ ಇದೆ. ಆದ್ದರಿಂದ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತು ಮಾತನಾಡುವುದು ಕಷ್ಟ. ಆದರೆ ಐಸಿಸಿ ಟೂರ್ನಿಗಳಲ್ಲಿ ಕಾಮೆಂಟರಿ ಹೇಳಬೇಕೆಂದು ಅನ್ನಿಸುತ್ತಿದೆ. ಮೈದಾನದಲ್ಲಿರೋ ಆಟಗಾರರಿಗೆ ಮಾತ್ರ ಸಂದರ್ಭದ ಒತ್ತಡ ಗೊತ್ತಾಗುತ್ತೆ. ಯುವ ಕ್ರಿಕೆಟಿಗರನ್ನು ಅನಗತ್ಯವಾಗಿ ವಿಮರ್ಶೆ ಮಾಡುವುದು ನನ್ನಿಂದ ಆಗುವುದಿಲ್ಲ. ಆದ್ದರಿಂದ ಹೆಚ್ಚು ದಿನ ಕಾಮೆಂಟರಿ ಮಾಡುವುದಿಲ್ಲ. ಯುವ ಆಟಗಾರರ ತಪ್ಪುಗಳನ್ನು ತಿಳಿದುಕೊಳ್ಳುವಂತೆ ಮಾಡುವುದು ಮಾತ್ರ ಕಾಮೆಂಟರಿ ನೀಡುವವರ ಜವಾಬ್ದಾರಿ ಅಷ್ಟೇ ಎಂದು ಯುವಿ ಅಭಿಪ್ರಾಯ ಪಟ್ಟಿದ್ದಾರೆ.

2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೀಂ ಇಂಡಿಯಾ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಯುವಿ ಕ್ರಿಕೆಟ್ ವೃತ್ತಿ ಜೀವನ ಹಳಿತಪ್ಪಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಯುವಿ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೀತಿ ಧೋನಿ ತಮಗೆ ನಾಯಕರಾಗಿ ಸರಿಯಾದ ಬೆಂಬಲ ನೀಡಲಿಲ್ಲ. ಸುರೇಶ್ ರೈನಾಗೆ ಧೋನಿ ಬೆಂಬಲ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿದ್ದರು.

2011ರ ವಿಶ್ವಕಪ್ ಸಂದರ್ಭದ ಟೀಂ ಇಂಡಿಯಾ ಆಯ್ಕೆಗೆ ಆಲ್‍ರೌಂಡರ್ ಗಳಾದ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ ಆಯ್ಕೆ ಗೊಂದಲ ಮೂಡಿತ್ತು. ನಾಯಕರಾಗಿದ್ದ ಧೋನಿಗೆ ರೈನಾ ಫೆವರಿಟ್ ಆಟಗಾರರರಾಗಿದ್ದರು. ಆದರೆ ಯೂಸುಫ್, ನಾನು ಉತ್ತಮ ಫಾರ್ಮ್‍ನಲ್ಲಿದ್ದೆವು. ನಾನು ವಿಕೆಟ್ ಗಳಿಸುತ್ತಿದ್ದ ಕಾರಣ ನನ್ನನ್ನು ತಂಡದಿಂದ ಕೈ ಬಿಡಲು ಸಾಧ್ಯವಾಗಿರಲಿಲ್ಲ ಎಂದು ಯುವಿ ವಿವರಿಸಿದ್ದರು.

Comments

Leave a Reply

Your email address will not be published. Required fields are marked *