ಯುವ ರಾಜ್‌ಕುಮಾರ್‌ ಸಿನಿಮಾದ ಟೈಟಲ್: ‘ಜ್ವಾಲಾಮುಖಿ’ನಾ? ಅಥವಾ ‘ಅಶ್ವಮೇಧ’ನಾ?

ಇಂದು ಸಂಜೆ 6.55ಕ್ಕೆ ಯುವ ರಾಜ್‌ಕುಮಾರ್‌ (Yuva Rajkumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಳ್ಳುತ್ತಿದೆ. ಟೀಸರ್ ಬಿಡುಗಡೆ ಕ್ಷಣಗಣನೆಯ ಹೊತ್ತಿನಲ್ಲಿ ಚಿತ್ರದ ಟೈಟಲ್ (Title) ಏನಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಜೊತೆಗೆ ಎರಡು ಶೀರ್ಷಿಕೆಗಳು ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಡಾ.ರಾಜ್‌ಕುಮಾರ್‌ ನಟನೆಯ ‘ಅಶ್ವಮೇಧ’ (Ashwamedha) ಅಥವಾ ‘ಜ್ವಾಲಾಮುಖಿ’ (Jwalamukhi) ಚಿತ್ರಗಳ ಹೆಸರನ್ನೇ ಯುವ  ಸಿನಿಮಾಗೆ ಇಡಲಾಗಿದೆ ಎಂದು ಕೇಳಿ ಬರುತ್ತಿದೆ.

ಡಾ.ರಾಜ್ ಕುಟುಂಬದ ಅಭಿಮಾನಿಗಳು ಕೂಡ ಈ ಎರಡೂ ಹೆಸರಿನ ಪೋಸ್ಟರ್ ಗಳನ್ನು ತಮ್ಮದೇ ಆದ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಎರಡು ಶೀರ್ಷಿಕೆಗಳಲ್ಲಿ ಒಂದಂತೂ ಪಕ್ಕಾ ಎಂದೇ ಹೇಳಲಾಗುತ್ತಿದೆ. ಅಲ್ಲದೇ, ಜ್ವಾಲಮುಖಿಯೇ ಫಿಕ್ಸ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸಹಜವಾಗಿಯೇ ಟೈಟಲ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಯಾವ ಟೈಟಲ್ ಅನ್ನು ಚಿತ್ರತಂಡ ಘೋಷಿಸಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

ಈ ಹಿಂದೆ ಸಿನಿಮಾದ ಟೀಸರ್ ಮತ್ತು ಟೈಟಲ್ ಲಾಂಚ್ ಅನ್ನು ಪುನೀತ್ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದಂದು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅಪ್ಪು ಹುಟ್ಟುಹಬ್ಬ 14 ದಿನ ಬಾಕಿ ಇರುವಾಗಲೇ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಾರಣ ಅಂದು ಪುನೀತ್ ಪತ್ನಿ ಅಶ್ವಿನಿ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಶುಕ್ರವಾರ ಸಂಜೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ಮುಂದೆ ಬಂದಿದೆಯಂತೆ.

ಈ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್‌ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜ್ ಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ.  ಪುನೀತ್  ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.

ಅಂದುಕೊಂಡಂತೆ ಆಗಿದ್ದರೆ ಯುವ ಈ ಹಿಂದೆಯೇ ಲಾಂಚ್ ಆಗಬೇಕಿತ್ತು. ಯುವಗಾಗಿಯೇ ‘ಯುವ ರಣಧೀರ ಕಂಠೀರವ’ ಸಿನಿಮಾ ಮಾಡಲು ಹೊರಟಿದ್ದರು ಜಾಕಿ ತಿಮ್ಮಯ್ಯ. ಸಾಕಷ್ಟು ಹಣ ಖರ್ಚು ಮಾಡಿ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ, ಆ ಸಿನಿಮಾ ಮುಂದುವರೆಯಲಿಲ್ಲ. ಈ ಕಾರಣದಿಂದಾಗಿ ಸಂತೋಷ್ ಆನಂದ್ ರಾವ್ ಅವರ ಚಿತ್ರವೇ ಯುವ ನಟನೆಯ ಚೊಚ್ಚಲು ಸಿನಿಮಾವಾಗಲಿದೆ.

Comments

Leave a Reply

Your email address will not be published. Required fields are marked *