ಕೆಸರು ಗದ್ದೆಯಲ್ಲಿ ಆಡಿ, ಕುಣಿದಾಡಿ ಮಿಂದೆದ್ದ ಯುವಕ- ಯುವತಿಯರು

ಮಂಗಳೂರು: ಮಕ್ಕಳು, ಯುವಕ- ಯುವತಿಯರೆಲ್ಲ ಸೇರಿ ಗದ್ದೆಯ ಕೆಸರು ನೀರಿನಲ್ಲಿ ಆಡಿ, ಕುಣಿದಾಡಿದ ದೃಶ್ಯ ಮಂಗಳೂರಿನಲ್ಲಿ ಕಂಡು ಬಂದಿದೆ.

ಮಂಗಳೂರು ನಗರ ಹೊರವಲಯದ ಪಾವಂಜೆಯಲ್ಲಿ ಹಳ್ಳಿ ಸೊಗಡಿನ ನೈಜ ಚಿತ್ರಣವನ್ನು ಉಣಬಡಿಸಿತ್ತು. ಇಲ್ಲಿ ನಗರದ ಬಹುತೇಕ ಶಾಲೆಗಳ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು. ಯುವಕ- ಯುವತಿಯರು ಸೇರಿ ಕೆಸರಿನ ಪರಿವೇ ಇಲ್ಲದಂತೆ ಕುಣಿದಾಡುತ್ತಾ ಆಟವಾಡಿದ್ದಾರೆ. ನೀರಾಟದ ಜೊತೆಗೆ ಫಿಲ್ಮಿ ಹಾಡುಗಳಿಗೆ ವಿದ್ಯಾರ್ಥಿಗಳು ಗಡದ್ದಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು.

ಪಾವಂಜೆ ಪಕ್ಕದ ಬಾಕಿಮಾರು ಗದ್ದೆಯಲ್ಲಿ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ 11ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ನಗರದ ಮಕ್ಕಳಿಗೆ ವಿಭಿನ್ನ ಅನುಭವ ನೀಡಿತು. ಕೃಷಿ ಚಟುವಟಿಕೆಗಳು ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ನಗರ ವಾಸಿಗಳು ಹೀಗೆ ಕೆಸರಿನಾಟದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಕೆಸರಿನಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್ ಆಟಗಳ ಜೊತೆ ಹಳ್ಳಿ ಮೂಲದ ಜನಪದ ಕ್ರೀಡೆಗಳು ನಗರದ ಮಕ್ಕಳು, ಮಹಿಳೆಯರಿಗೆ ಹಳ್ಳಿ ಬದುಕಿನ ಚಿತ್ರಣವನ್ನು ನೀಡುವಂತಿತ್ತು.

ಚೆನ್ನಾಗಿ ಹದ ಮಾಡಿದ ಕೆಸರಗದ್ದೆಯನ್ನು ನಗರದ ಮಕ್ಕಳು ನೋಡೋದೆ ಅಪರೂಪ. ಅಂಥದರಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಮೈಯ ಪರಿವೇ ಇಲ್ಲದೆ ಕೆಸರಿನಲ್ಲಿ ಡ್ಯಾನ್ಸ್ ಮಾಡಿದ್ದರು. ಕೆಸರಿನ ಪರಿಮಳವನ್ನು ಆಘ್ರಾಣಿಸುತ್ತಾ ಪಿರಮಿಡ್ ರಚನೆ ಮೂಲಕ ಮಡಕೆ ಒಡೆಯುವುದು, ಹಿಮ್ಮುಖ ಓಟ, ಒಂಟಿ ಕಾಲಿನ ಓಟ, ನಿಧಿ ಹುಡುಕಾಟ, ಮಹಿಳೆಯರ ಹಗ್ಗಜಗ್ಗಾಟ ಹೀಗೆ ಹತ್ತು ಹಲವು ಕ್ರೀಡೆಗಳು ಒಂದೇ ದಿನದಲ್ಲಿ ಹಳ್ಳಿ ಹೈದರನ್ನು ಸೃಷ್ಟಿಸುವಂತೆ ಮಾಡಿತ್ತು. ಪರಸ್ಪರ ಕೆಸರಿನ ಎರಚಾಟ, ಕೆಸರಿನಲ್ಲಿ ಉರುಳಾಡಿದ್ದು ನಗರದ ವಿದ್ಯಾರ್ಥಿಗಳಿಗೆ ದೇಸಿ ಸೊಗಡನ್ನು ಪರಿಚಯ ಮಾಡಿತ್ತು.

ಆಧುನಿಕ ಕ್ರೀಡೆಗಳ ಅಬ್ಬರದ ಮಧ್ಯೆ ಮರೆಯಾಗುತ್ತಿರುವ ತುಳುನಾಡಿನ ಗ್ರಾಮೀಣ ಕ್ರೀಡೆಗಳನ್ನು ನಗರದ ಮಂದಿಗೆ ಪರಿಚಯಿಸುವ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ದೊರೆಯಿತು.

Comments

Leave a Reply

Your email address will not be published. Required fields are marked *