ಬೆಂಗಳೂರು: ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಜಿಗಣಿ ಸಮೀಪದ ಕಲ್ಲುಬಾಳ ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ನಡೆದಿದೆ.
ನರೇಶ್ (18) ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ.
ಶುಕ್ರವಾರ ಸಂಜೆ ಸುಮಾರು 4.30ಕ್ಕೆ ನರೇಶ್ ಮತ್ತು ಆತನ ಜೊತೆ 8 ಜನ ಸ್ನೇಹಿತರು ಕಲ್ಲುಬಾಳು ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ಈಜುಲು ಹೋಗಿದ್ದಾರೆ. ಮೊದಲು ನರೇಶ್ ಜೊತೆ ಮೂವರು ಸ್ನೇಹಿತರು ಈಜಲು ಹೋಗಿದ್ದಾರೆ. ಆದರೆ ಕಲ್ಲು ಕ್ವಾರಿ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನರೇಶ್ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲರೂ ಭಯಗೊಂಡು ಓಡಿ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

ಪೋಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಕ್ವಾರಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶವ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಘಟನೆಯ ಸಂಬಂಧ ಜಿಗಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.




Leave a Reply