21 ವರ್ಷ ಸೇವೆ ಸಲ್ಲಿಸಿ ಬಂದ ಯೋಧನಿಗೆ ಅದ್ಧೂರಿ ಮೆರವಣಿಗೆ

-ಮತ್ತೆ ಸೇನೆಗೆ ಹೋಗಲು ಸಿದ್ಧವೆಂದ ವೀರಯೋಧ

ದಾವಣಗೆರೆ: ಬಿಎಸ್‍ಎಫ್‍ನಲ್ಲಿ 21 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಆಗಮಿಸಿದ ಯೋಧನನ್ನು ಗ್ರಾಮದವರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ದಾವಣಗೆರೆಯ ಹರಸಾಪುರ ಗ್ರಾಮ ನಿವಾಸಿ ಯೋಧ ದೇವಾನಾಯ್ಕ್ ನಿವೃತ್ತಿಯಾಗಿ ಗ್ರಾಮಕ್ಕೆ ಹಿಂದಿರುಗಿದ್ದಾರೆ. ತಮ್ಮ ಗ್ರಾಮದ ಯೋಧ ವಾಪಸ್ ಬರುವ ವಿಚಾರ ತಿಳಿದು ನಗರದ ರೈಲ್ವೆ ನಿಲ್ದಾಣದ ಬಳಿ ಯೋಧನಿಗೆ ಯುವಕರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ದೇವಾನಾಯ್ಕ್ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಗುಜರಾತ್, ವೆಸ್ಟ್ ಬೆಂಗಲ್, ಮೇಘಾಲಯ ಹಾಗೂ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ರೈಲಿನಿಂದ ಇಳಿಯುತ್ತಿದ್ದಂತೆ ಯುವಕರು ಯೋಧನನ್ನು ಹೆಗಲ ಮೇಲೆ ಕೂರಿಸಿಕೊಂಡು ವೀರ ಯೋಧನಿಗೆ ಜಯವಾಗಲಿ ಎನ್ನುವ ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಸ್ವಾಗತ ಮಾಡಿದರು.

ನಿವೃತ್ತಿ ಯೋಧ ದೇವಾನಾಯ್ಕ್ ಅವರಿಗೆ ಹಾರ, ಶಾಲು ಹಾಕಿ ಜೈಕಾರ ಕೂಗಿದರು. ಅಷ್ಟೇ ಅಲ್ಲದೇ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಾನು ತರಬೇತಿ ಮುಗಿಸಿ ಬಿಎಸ್‍ಎಫ್‍ಗೆ ಸೇರಿದಾಗ ಕಾರ್ಗಿಲ್ ಯುದ್ಧನಡೆಯುತ್ತಿತ್ತು, ಆಗ ನಾನು ಎರಡು ವರ್ಷ ಜಮ್ಮು ಕಾಶ್ಮೀರದಲ್ಲಿದ್ದೆ. ಮೂರು ವರ್ಷ ಗುಜರಾತ್‍ನಲ್ಲಿ, ವೆಸ್ಟ್ ಬೆಂಗಲ್‍ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದೇನೆ. ನಮ್ಮ ದೇಶ ಎಲ್ಲವನ್ನು ಬಿಟ್ಟು ಒಂದಾಗಬೇಕು ಎಂಬುವುದು ನನ್ನ ಆಶಯವಾಗಿದೆ. ದೇಶ ಸೇವೆ ಮಾಡಿದ್ದಕ್ಕೆ ನಮಗೆ ಹೆಮ್ಮೆಯಾಗಿದೆ. ಮುಂದೆ ಸೇನೆಗೆ ಹೋಗುವ ಸಂದರ್ಭ ಬಂದರೆ ನಾವು ಹೋಗಲು ಸಿದ್ಧರಿದ್ದೇವೆ. ನಮ್ಮ ದೇಶ ಮೊದಲು ನಂತರ ನಮ್ಮ ಧರ್ಮ ಎಂದು ನಿವೃತ್ತಿ ಯೋಧ ದೇವಾನಾಯ್ಕ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *