ನಾಯಿಗಳನ್ನು ತೊಳೆಯಲೆಂದು ಕೆರೆಗೆ ಇಳಿದಾಗ ಮೊಸಳೆ ದಾಳಿ- ಯುವಕನ ಕೈ ಕಟ್!

ರಾಮನಗರ: ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಕೆರೆಯಲ್ಲಿ ತನ್ನ ನಾಯಿಗಳನ್ನು ತೊಳೆಯಲು ಹೋದ ಸಂದರ್ಭದಲ್ಲಿ ಮೊಸಳೆಯೊಂದು ಆತನ ಮೇಲೆ ದಾಳಿ ನಡೆಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ಇಂದಿರಾನಗರ ನಿವಾಸಿ ಮದೀತ್(27) ಮೊಸಳೆ ದಾಳಿಗೆ ಒಳಗಾದ ಯುವಕನಾಗಿದ್ದು, ಮೊಸಳೆ ದಾಳಿಯಿಂದ ಇದೀಗ ಯುವಕ ತನ್ನ ಕೈ ಕಳೆದುಕೊಂಡಿದ್ದಾನೆ.

ತನ್ನ ಗೆಳತಿಯೊಂದಿಗೆ ಎರಡು ನಾಯಿಗಳನ್ನು ಕರೆದುಕೊಂಡು ಬಂದಿದ್ದ ಯುವಕ ತಟ್ಟೆಕೆರೆ ಗ್ರಾಮದ ಹೊರವಲಯದಲ್ಲಿನ ಕೆರೆಯಲ್ಲಿ ನಾಯಿಗಳನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಈ ಕೆರೆಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಆಗಾಗ ಹಸುಗಳ ಮೇಲೆ ದಾಳಿ ನಡೆಸುತ್ತಿದ್ದವು. ಮೊಸಳೆಗಳು ಕೆರೆಯಲ್ಲಿರುವ ಬಗ್ಗೆ ಸೂಚನ ಫಲಕಗಳನ್ನು ಹಾಕಿದ್ರೂ ಇದನ್ನು ಅರಿಯದ ಮದೀತ್ ನೀರಿಗಿಳಿದ ವೇಳೆ ಆತನ ಕೈ ಮೊಸಳೆಗೆ ಆಹಾರವಾಗಿದೆ. ಘಟನೆಯ ಬಳಿಕ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *