ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

ಮಂಗಳೂರು: ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ಹತ್ಯೆ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಪಣಂಬೂರು, ಮುಲ್ಕಿ, ಬಜಪೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

ಅಂತರ್‌ ಜಿಲ್ಲೆ ಮತ್ತು ಅಂತರ್‌ ರಾಜ್ಯವನ್ನು ಸಂಪರ್ಕಿಸುವ ಗಡಿಯಲ್ಲಿ ಚೆಕ್‌ ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ಗುರುವಾರ ರಾತ್ರಿ 10 ಗಂಟೆಯಿಂದ ಅನಾವಶ್ಯಕವಾಗಿ ರಸ್ತೆಗೆ ಇಳಿದರೆ ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ. ವಾಹನವನ್ನು ಜಪ್ತಿ ಮಾಡಲಾಗುವುದು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜನರು ಈ ಆದೇಶವನ್ನು ಪಾಲಿಸಬೇಕು ಎಂದು ಶಶಿಕುಮಾರ್‌ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಹತ್ಯೆಗೆ ನಡೆದಿದ್ದ ಪ್ಲಾನ್ ಬಿಚ್ಚಿಟ್ಟ ಬಂಧಿತ ಆರೋಪಿಗಳು

ಮತ್ತೊಂದು ಕೊಲೆ:
ದಕ್ಷಿಣ ಕನ್ನಡದಲ್ಲಿ ಕಳೆದ 10 ದಿನಗಳಲ್ಲಿ ಒಟ್ಟು ಮೂವರ ಬರ್ಬರ ಹತ್ಯೆ ನಡೆದಿದೆ. ಮಂಗಳೂರಿನ ಹೊರವಲಯದ ಸುರತ್ಕಲ್‍ನಲ್ಲಿ ಮಂಗಳಪೇಟೆ ನಿವಾಸಿ 23 ವರ್ಷದ ಫಾಜಿಲ್‍ನನ್ನು ನಾಲ್ವರು ದುಷ್ಕರ್ಮಿಗಳು ಹತ್ಯೆಗೈಯ್ದಿದ್ದಾರೆ. ಹೊಂಚು ಹಾಕಿ ಕಾದು ಕುಳಿತು ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.

ಗಾಯಾಳು ಫಾಜಿಲ್‍ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ಹಲವು ವರ್ಷಗಳಿಂದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಫಾಜಿಲ್ ಸದ್ಯ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಬಟ್ಟೆ ಅಂಗಡಿ ಬಳಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಫಾಜಿಲ್‌ ಹತ್ಯೆ ಬಳಿಕ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್ ಗಸ್ತು ಹೆಚ್ಚಳಕ್ಕೆ ಸೂಚಿಸಲಾಗಿದೆ. ಹೊಯ್ಸಳ, ಚೀತಾ ವಾಹನ ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು, ಕೆ.ಎಸ್.ಆರ್.ಪಿ ತುಕಡಿ ನಿಯೋಜನೆಗೂ ಸೂಚಿಸಲಾಗಿದೆ.

ಈ ಮಧ್ಯೆ, ಮಂಗಳೂರಿನ ಸುರತ್ಕಲ್ ಹತ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿಎಂ ಬೊಮ್ಮಾಯಿ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *