3 ವರ್ಷದ ಹಿಂದೆ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ- 3 ದಿನಗಳ ಹಿಂದೆ ಹಿಂದೂ ಯುವತಿಯೊಂದಿಗೆ ಮದುವೆ?

-ಹಿಂದೂ, ಮುಸ್ಲಿಂ ಯುವತಿಯರ ಬಾಳಲ್ಲಿ ಮುಸ್ಲಿಂ ಯವಕನ ಚೆಲ್ಲಾಟ

ಚಿಕ್ಕಬಳ್ಳಾಪುರ: ಮೂರು ವರ್ಷದ ಹಿಂದೆ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಮುಸ್ಲಿಂ ಯುವಕನೊರ್ವ, ಮೂರು ದಿನಗಳ ಹಿಂದೆ ಹಿಂದೂ ಯುವತಿಯ ಜೊತೆ ಪರಾರಿಯಾಗಿ ಮದುವೆಗೆ ಮುಂದಾಗಿದ್ದಾನೆ.

ಇದರಿಂದ ಒಂದೆಡೆ ಪ್ರೀತಿ-ಪ್ರೇಮ ಅಂತ ನಿಶ್ಚಿತಾರ್ಥ ಮಾಡಿಕೊಂಡು ಮೋಸ ಹೋದ ಮುಸ್ಲಿಂ ಯುವತಿ ಹಾಗೂ ಮತ್ತೊಂದೆಡೆ ಮಗಳ ಮನಸ್ಸು ಕೆಡಿಸಿ ಮೋಸ ಮಾಡಿದ್ದಾನೆ ಅಂತ ಹಿಂದೂ ಯುವತಿಯ ತಂದೆ-ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

ಏನಿದು ಪ್ರಕರಣ?:
ಮೆಹಬೂಬ್ ಪಾಷಾ ಯುವತಿಯರಿಗೆ ಮೋಸ ಮಾಡಿದ ವ್ಯಕ್ತಿ. ಮೆಹಬೂಬ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ. ಹೋಟೆಲ್ ನಡೆಸ್ತಿರೋ ಮೆಹಬೂಬ್, 3 ವರ್ಷಗಳ ಹಿಂದೆ ರೈಲಿನಲ್ಲಿ ಪರಿಚಯವಾದ ಡಿ ಪಾಳ್ಯ ಗ್ರಾಮದ ಮುಸ್ಲಿಂ ಯುವತಿ ಜೊತೆ ಪ್ರೀತಿ-ಪ್ರೇಮ ಅಂತ ಸುತ್ತಾಡಿ ಕೊನೆಗೆ ಯುವತಿಯ ಮನೆಯವರನ್ನು ಕಾಡಿ-ಬೇಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನಿಶ್ಚಿತಾರ್ಥ ಆದ ಮೇಲೆ ಮದುವೆ ಮಾಡಿಕೊಳ್ಳುವ ಬದಲು ಕುಂಟು ನೆಪ ಹೇಳಿಕೊಂಡು ಈ ವರ್ಷ, ಮುಂದಿನ ವರ್ಷ ಅಂತ ಮದುವೆ ಮುಂದೂಡಿದ್ದ ಅಸಾಮಿ ಇದೀಗ ಮೂರು ದಿನಗಳ ಹಿಂದೆ ಗಂಗಸಂದ್ರ ಗ್ರಾಮದ ಹಿಂದೂ ಯುವತಿ ಜೊತೆ ಪರಾರಿಯಾಗಿದ್ದಾನೆ. ಸದ್ಯ ಹಿಂದೂ ಯುವತಿ ಹಾಗೂ ಮೆಹಬೂಬ್ ಪಾಷಾ ಇಬ್ಬರು ಗೌರಿಬಿದನೂರು ಉಪನೋಂದಾಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ಮಾಡಿಕೊಳ್ಳೋಕೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

ಈ ಮೆಹಬೂಬ್ ಪಾಷಾ ಕಳೆದ ವರ್ಷವೂ ಕೂಡ ಬೇರೊಂದು ಯುವತಿ ಜೊತೆಗೆ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದನಂತೆ. ಆ ವೇಳೆ ಮುಸ್ಲಿಂ ಯುವತಿ ಗಲಾಟೆ ಮಾಡಿ ಕ್ಯಾತೆ ತೆಗೆದಾಗ ಮುಂದಿನ ವರ್ಷ ಮದುವೆಯಾಗುವುದಾಗಿ ನಂಬಿಸಿದ್ದನಂತೆ. ಆದರೆ ಈಗ ಮತ್ತೊಂದು ವರ್ಷ ಕಳೆಯೋದ್ರ್ರೊಳಗೆ ಮತ್ತೊಂದು ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ. ಹೀಗಾಗಿ ಒಂದೆಡೆ ನೊಂದ ಮುಸ್ಲಿಂ ಯುವತಿ, ಮತ್ತೊಂದೆಡೆ ಹಿಂದೂ ಯುವತಿ ತಂದೆ-ತಾಯಿ ಚಿಕ್ಕಬಳ್ಳಾಪರ ಎಸ್‍ಪಿ ಕಾರ್ತಿಕ್ ರೆಡ್ಡಿ, ಗೌರಿಬಿದನೂರು ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.

ಇತ್ತ ನಿಶ್ಚಿತಾರ್ಥದ ಹೆಸರಲ್ಲಿ ಮೋಸ ಮಾಡಿದ ಮೆಹಬೂಬ್ ಪಾಷಾ ಗೆ ತಕ್ಕ ಶಿಕ್ಷೆಯಾಗಬೇಕು ಅಂತ ಮುಸ್ಲಿಂ ಯುವತಿ ಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ನಮ್ಮ ಮಗಳನ್ನ ಏನಾದ್ರೂ ಮಾಡಿ ನಮಗೆ ನ್ಯಾಯ ಕಳಿಸಿಕೊಡಿ ಅಂತ ಹಿಂದೂ ಯುವತಿಯ ಪೋಷಕರು ಪೊಲೀಸರ ಬಳಿ ಅವಲತ್ತುಕೊಳ್ತಿದ್ದಾರೆ. ಮೆಹಬೂಬ್ ಪಾಷಾ ವಿರುದ್ಧ ಎರಡು ಕುಟುಂಬದವರು ಲವ್-ಜಿಹಾದ್ ಆರೋಪ ಕೂಡ ಹೊರಿಸಿದ್ದಾರೆ. ಹೀಗಾಗಿ ಮೆಹಬೂಬ್ ಪಾಷಾ ಹಾಗೂ ಹಿಂದೂ ಯುವತಿ ಇಬ್ಬರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡೋಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *