ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ

ಹಾಸನ: ಬಸ್ಸಿಗಾಗಿ ಕಾಯುತ್ತಿದ್ದ ಯುವತಿಗೆ ಯುವಕನೊಬ್ಬ ತಾಳಿ ಕಟ್ಟಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯ ಅತ್ತೆಯ ಮಗ ಮನು ಎಂಬವನು ಈ ಕೃತ್ಯ ಎಸಗಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದವನಾಗಿದ್ದು, ತನ್ನ ಅತ್ತೆ ಮಗಳನ್ನು ಇಷ್ಟಪಡುತ್ತಿದ್ದನು. ಆದರೆ ಯುವತಿ ಮನುವನ್ನು ಮದುವೆಯಾಗಲು ನಿರಾಕರಿಸಿದ್ದಳು. ವಿರೋಧವಿದ್ದರೂ ಯುವಕ ಬಲವಂತವಾಗಿ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನೆ.

ಯುವತಿ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಳು. ಹೀಗಾಗಿ ಯುವತಿ ಬಸ್ ಸ್ಟ್ಯಾಂಡ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಯುವತಿಯ ಅತ್ತೆ ಮಗ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಮನುವಿನ ಕೈ ಕಚ್ಚಿದ್ದಾಳೆ. ಅಲ್ಲದೆ ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದಳು. ಕೈ ಕಚ್ಚಿದರೂ, ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದರು ಸಹ ಮನು, ಯುವತಿಯನ್ನು ಬಿಡದೆ ತಾಳಿ ಕಟ್ಟಿ ಮದುವೆ ಆಗಿದ್ದಾನೆ.

ಈ ಘಟನೆ ನಂತರ ಆರೋಪಿ ಹಾಗೂ ಯುವತಿ ಎಲ್ಲಿ ಇದ್ದಾರೆ ಎಂಬುದು ತಿಳಿದು ಬಂದಿಲ್ಲ. ಸದ್ಯ ಯುವತಿಯ ಪೋಷಕರು ಈ ಬಗ್ಗೆ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿಸ್ಸಿಂಗ್ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *