ಸ್ನೇಹಿತನ ಹುಟ್ಟುಹಬ್ಬದ ಆಚರಣೆ ವೇಳೆ ದುಬಾರೆಯಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ: ಸ್ನೇಹಿತರೊಂದಿಗೆ ನದಿ ದಂಡೆಯಲ್ಲಿ ಕಾಲ ಕಳೆಯುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪ್ರವಾಸಿ ತಾಣ ದುಬಾರೆಯಲ್ಲಿ ನಡೆದಿದೆ.

ಸುಮನ್ (23) ಮೃತ ದುರ್ದೈವಿ. ಸುಮನ್ ಮೂಲತಃ ರಂಗ ಸಮುದ್ರ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದನು. ಸುಮನ್ ತನ್ನ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಕೊಡಗಿನಲ್ಲಿರುವ ದುಬಾರೆಗೆ ಬಂದಿದ್ದನು.

ಶುಕ್ರವಾರ ಸುಮನ್ ಹಾಗೂ ಆತನ ಗೆಳೆಯರು ನಂಜರಾಯಪಟ್ಟಣ ಸಮೀಪದ ದಾಸವಾಳ ಎಂಬಲ್ಲಿ ಹರಿಯುತ್ತಿರುವ ಕಾವೇರಿ ನದಿಯ ತಟದಲ್ಲಿ ಕಾಲ ಕಳೆಯುತ್ತಿದ್ದರು. ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಸುಮನ್ ನದಿಗೆ ಇಳಿದಿದ್ದಾನೆ. ಆದರೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸುಮನ್ ಮೇಲಕ್ಕೆ ಬರಲಾಗದೇ ಅಲ್ಲಿಯೇ ಜಲ ಸಮಾಧಿಯಾಗಿದ್ದಾನೆ.

ನಂತರ ಮೃತದೇಹನ್ನು ನದಿಯಿಂದ ಮೇಲಕ್ಕೆ ತರಲಾಯಿತು. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *