ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

ಬೆಂಗಳೂರು: ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಆನೆ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯಲ್ಲಿ ನಡೆದಿದೆ.

ಮಂಗಳವಾರ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ರಜೆ ಇದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೆಂಗಳೂರಿನ ಗಿರಿನಗರ ನಿವಾಸಿ ಅಭಿಲಾಷ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ಹಕ್ಕಿಪಿಕ್ಕಿ ಕಾಲೋನಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸಫಾರಿಯೊಳಕ್ಕೆ ಪ್ರವೇಶಿಸಿದ್ದಾರೆ.

ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಬಲಿಯಾಗಿದ್ದಾರೆ ಎನ್ನಲಾಗಿದೆ.

ಹಕ್ಕಿಪಿಕ್ಕಿ ಕಾಲೋನಿಯಿಂದ ಆನೆಗಳಿದ್ದ ಸ್ಥಳಕ್ಕೆ 4 ಕಿಲೋ ಮೀಟರ್ ನಡೆದೇ ಬರಬೇಕು. ಇಷ್ಟು ದೂರದವರೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ಇಲ್ಲವೇ ಭದ್ರತಾ ಸಿಬ್ಬಂದಿಯೇ ಒಳಗೆ ಬಿಟ್ಟರೇ? ಎಂಬ ಅನುಮಾನಗಳು ಮೂಡುತ್ತಿವೆ. ಅಭಿಲಾಷ್ ಜೊತೆ ಇನ್ನೂ ಮೂವರು ಸ್ನೇಹಿತರಿದ್ದರೆಂದು ಕೆಲವರು ಹೇಳುತ್ತಾರೆ. ಅವರೆಲ್ಲಾ ಎಲ್ಲಿಗೆ ಹೋದರು? ಯಾಕೆ ಈ ವಿಷಯ ಪೊಲೀಸರ ಗಮನಕ್ಕಾಗಲೀ ಅಥವಾ ಅಭಿಲಾಷ್ ಮನೆಯವರಿಗು ವಿಷಯ ತಿಳಿಸದೇ ಪರಾರಿಯಾಗಿದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಘಟನೆಯ ವಿಷಯ ತಿಳಿದ ಪಾರ್ಕ್ ನ ಅಧಿಕಾರಿಗಳು ಸೀಗೆಕಟ್ಟೆ ಪೊಲೀಸರಿಗೆ ವಿಷಯ ತಿಳಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ವಿಷಯ ತಿಳಿದು ಬಂದ ಅಭಿಲಾಷ್ ನ ಸಂಬಂಧಿಕರು ಇಂದು ಬೆಳಗ್ಗೆ ಹಕ್ಕಿಪಿಕ್ಕಿ ಕಾಲೋನಿ ಬಳಿಯಿದ್ದ ಅಭಿಲಾಷ್ ನ ದ್ವಿಚಕ್ರ ವಾಹನ ಗುರುತಿಸಿದ್ದಾರೆ. ಬಳಿಕ ಪಾರ್ಕ್ ನ ಅಧಿಕಾರಿಗಳ ಭದ್ರತಾ ಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಲವು ಅನುಮಾನಗಳ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *