ನನ್ನ ಸಾವಿಗೆ ನಾನು ಕಾರಣನಲ್ಲ, ನನ್ನ ದಡ್ಡತನ ಕಾರಣ- ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು: ಇತ್ತೀಚೆಗೆ ಮೀಟರ್ ಬಡ್ಡಿ ದಂಧೆಗೆ ಸಿಲುಕಿದ್ದ ಯುವಕನೊಬ್ಬ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಅದೇ ಮೀಟರ್ ಬಡ್ಡಿ ದಂಧೆಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ನಡೆದಿದೆ.

ಸಂತೋಷ್(28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇತ್ತೀಚೆಗೆ ಸುನಿಲ್ ಎಂಬವನಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದ. ಬಡ್ಡಿಗಾಗಿ ಸುನಿಲ್ ಸಂತೋಷನ ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡಿದ್ದ. ಇದರಿಂದ ಖಿನ್ನತೆಗೊಳಗಾಗಿದ್ದ ಸಂತೋಷ್, ಗುರುವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಡೆತ್‍ನೋಟ್‍ನಲ್ಲಿ ಏನಿದೆ?: ಅಮ್ಮ, ಅಪ್ಪ ನಾನು ಸಂತು. ಪಪ್ಪಾ ನನ್ನ ಕ್ಷಮಿಸಿಬಿಡಿ. ನನ್ನ ಕೈಯಲ್ಲಿ ಈ ಕಷ್ಟ ಅನುಭವಿಸಕ್ಕೆ ಆಗಲ್ಲ. ಇವತ್ತು ನನ್ನ ಜೊತೆ ಯಾರೂ ಇಲ್ಲ ಅಂತ ನನಗೆ ಅನ್ನಿಸುತ್ತಿದೆ. ಅಣ್ಣ ಅರುಣ ಅಪ್ಪ ಅಮ್ಮನ್ನ ಚೆನ್ನಾಗಿ ನೋಡಿಕೋ ಪ್ಲೀಸ್. ಅಪ್ಪ ನನಗೆ ಒಂದು ಅವಕಾಶ ಕೊಡಬೇಕಾಗಿತ್ತು. ಅಪ್ಪ ನನಗೆ ನೀನು ತುಂಬಾ ಸರಿ ಹೇಳಿದ್ದೆ, ಯಾರ ಜೊತೆ ಸೇರಬೇಡ ಅಂತಾ. ಆದರೂ ನಾನು ಕೇಳಿಲ್ಲ. ಅದೇ ಇವತ್ತು ನನ್ನ ಈ ತರ ಮಾಡಿಬಿಟ್ಟಿದೆ.

ರಾಮ ಸಾರಿ ರಾಮ ನನ್ನ ಸ್ನೇಹಿತ ಅಂತ ನೀನೊಬ್ಬ ನನ್ನ ಜೊತೆ ಇದ್ದೆ. ಆದರೆ ನಾನು ಹೋಗ್ತಾ ಇದ್ದೀನಿ. ಮತ್ತೆ ಈ ಪತ್ರ ಓದೋ ಎಲ್ಲರಿಗೂ ನಾನು ಹೇಳೋದು ಒಂದೇ. ಸಾಲ ಕೊಡಿ ಆದರೆ ಪ್ರಾಣ ಕೇಳಬೇಡಿ. ನನ್ನ ಸಾವಿಗೆ ನಾನೇ ಕಾರಣವಲ್ಲ. ನನ್ನ ದಡ್ಡತನವೇ ಕಾರಣ. ನನ್ನನ್ನು ಎಲ್ಲರೂ ಕ್ಷಮಿಸಿ. ಮತ್ತೆ ಪಪ್ಪ ನನ್ನ ನೀವು ದಯವಿಟ್ಟು ಈ ಊರಲ್ಲಿ ಮಣ್ಣು ಮಾಡಬಾರದು. ನನ್ನನ್ನು ನೀವು ಸುಟ್ಟು ನಂತರ ನದಿಗೆ ಹಾಕಬೇಕು ಎಂದು ಡೆತ್‍ನೋಟ್ ಬರೆದಿದ್ದಾನೆ.

ಈ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *