ನವದೆಹಲಿ: ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರನ್ನು ಇನ್ನೂ ಲಿಂಕ್ ಮಾಡಿಸಿಲ್ಲವಾದ್ರೆ ಆದಷ್ಟು ಬೇಗ ಮಾಡಿಸಿಕೊಳ್ಳಿ. ಯಾಕಂದ್ರೆ ಏಪ್ರಿಲ್ 30ರೊಳಗೆ ಆಧಾರ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗದಿದ್ರೆ ಅನಂತರ ನಿಮ್ಮ ಖಾತೆಯನ್ನ ಬ್ಲಾಕ್ ಮಾಡುವ ಅಧಿಕಾರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಇರುತ್ತದೆ.
2014ರ ಜುಲೈನಿಂದ 2015ರ ಆಗಸ್ಟ್ ನಡುವೆ ತೆರೆಯಲಾದ ಬ್ಯಾಂಕ್ ಖಾತೆಗಳಿಗೆ ಕೆವೈಸಿ ಮಾಹಿತಿ ಹಾಗೂ ಆಧಾರ್ ಕಾರ್ಡ್ ನಂಬರ್ ಒದಗಿಸಿ ಅದನ್ನು ಎಫ್‍ಎಟಿಸಿಎ (ಫಾರಿನ್ ಟ್ಯಾಕ್ಸ್ ಕಂಪ್ಲಯನ್ಸ್ ಆ್ಯಕ್ಟ್) ನಿಯಮಗಳಿಗೆ ಅನುಸಾರವಾಗಿ ಪ್ರಮಾಣೀಕರಿಸಿಕೊಳ್ಳಬೇಕಿದೆ.
ಈ ಅವಧಿ ಅಂದ್ರೆ ಏಪ್ರಿಲ್ 30ರೊಳಗೆ ಖಾತೆದಾರರು ಅಗತ್ಯ ಮಾಹಿತಿಯನ್ನ ಒದಗಿದಿದ್ರೆ ಖಾತೆಯನ್ನು ಬ್ಲಾಕ್ ಮಾಡುವ ಅಧಿಕಾರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಇರುತ್ತದೆ. ಅಗತ್ಯ ಮಾಹಿತಿಯನ್ನು ಒದಗಿಸಿದ ನಂತರವಷ್ಟೆ ಖಾತೆದಾರರು ತಮ್ಮ ಖಾತೆಯನ್ನು ಬಳಸಬಹುದಾಗಿದೆ. ಎಫ್‍ಎಟಿಸಿಎ ನಿಯಮಗಳ ವ್ಯಾಪ್ತಿಗೆ ಬರುವ ಖಾತೆಗಳಿಗೆ ಈ ನಿಬಂಧನೆ ಅನ್ವಯಿಸುತ್ತದೆ.
ಏಪ್ರಿಲ್ 30, 2017ರೊಳಗೆ ಅಗತ್ಯ ಮಾಹಿತಿಯನ್ನು ಒದಗಿಸದಿದ್ದರೆ ಖಾತೆಯನ್ನು ಬ್ಲಾಕ್ ಮಾಡುವುದಾಗಿ ಖಾತೆದಾರರಿಗೆ ತಿಳಿಸಲಾಗುತ್ತದೆ. ಆಗ ಖಾತೆದಾರರು ತಮ್ಮ ಖಾತೆಯಿಂದ ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡಲಾಗದಂತೆ ಬ್ಯಾಂಕ್ ನಿರ್ಬಂಧಿಸಿರುತ್ತದೆ ಎಂದು ತೆರಿಗೆ ಇಲಾಖೆ ಹೇಳಿಕೆ ನೀಡಿದೆ.
2015ರ ಜುಲೈನಲ್ಲಿ ಅಮೆರಿಕದ ಹೊಸ ಕಾನೂನು ಎಫ್‍ಎಟಿಸಿಎ ಅಡಿ ಭಾರತ ಮತ್ತು ಅಮೆರಿಕ ತೆರಿಗೆ ಮಾಹಿತಿ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದಿಂದ ಎರಡೂ ರಾಷ್ಟ್ರಗಳ ತೆರಿಗೆ ವಂಚನೆದಾರರ ಬಗೆಗಿನ ಮಾಹಿತಿ ವಿನಿಮಯಕ್ಕೆ ಮತ್ತಷ್ಟು ಪುಷ್ಠಿ ನೀಡಲು ಉದ್ದೇಶಿಸಲಾಗಿದೆ.

Leave a Reply