ಕೋಲಾರ: ಚೀಟಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ದೊಡ್ಡ ಕೆರೆಯಲ್ಲಿ ನಡೆದಿದೆ.
ಮಾಲೂರಿನ ಇಂದಿರಾ ನಗರದ ನಿವಾಸಿ ಪ್ರವೀಣ್ (25) ಕೊಲೆಯಾದ ಯುವಕ. ಮೃತ ಪ್ರವೀಣ್ ಬುಧವಾರ ಕೋಲಾರ ತಾಲೂಕಿನ ಉಮುಲು ಗ್ರಾಮಕ್ಕೆ ಚೀಟಿ ಹಣವನ್ನು ಪಡೆದುಕೊಂಡು ಬರುವುದಾಗಿ ಮನೆಯಿಂದ ಹೊರಟಿದ್ದ, ಆದರೆ ಇಂದು ಬೆಳಗ್ಗೆ ಮಾಲೂರಿನ ದೊಡ್ಡ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ದುಷ್ಕರ್ಮಿಗಳು ಪ್ರವೀಣ್ನ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಕೆರೆಗೆ ಬಿಸಾಡಿ ಹೋಗಿದ್ದಾರೆ. ಇಂದು ಬೆಳಗ್ಗೆ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರವೀಣ್ ಕಳೆದ 3 ತಿಂಗಳ ಹಿಂದೆಯಷ್ಟೇ ನಳಿನಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಹಣಕಾಸಿನ ವಿಚಾರವಾಗಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply