ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

ಮಡಿಕೇರಿ: ಚಾರಣಕ್ಕೆ (Trekking) ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.

ಮೃತ ದುರ್ದೈವಿಯನ್ನು ಜತಿನ್ ಕುಮಾರ್ (25) ಎಂದು ಗುರುತಿಸಲಾಗಿದ್ದು, ಈತ ಹರಿಯಾಣ (Haryana) ಮೂಲದ ನಿವಾಸಿಯಾಗಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿ ತಾ. ತಡಿಯಂಡಮೋಳು ಬೆಟ್ಟ ವೀಕ್ಷಣೆ ವೇಳೆ ಈ ಅವಘಡ ಸಂಭವಿಸಿದೆ.

ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಆಗಮಿಸಿದ್ದನು. ಅಂತೆಯೇ ಭಾನುವಾರ ಬೆಟ್ಟದ ಮೇಲೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿದೆ. ಕೆಲಹೊತ್ತಿನಲ್ಲೇ ಎದೆ ನೋವು ಜಾಸ್ತಿ ಆಗಿ ಜತಿನ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಸೇನೆ, ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ – ಮೂವರು ನಕ್ಸಲರ ಹತ್ಯೆ

ಯುವಕ ಪ್ರಾಣಬಿಟ್ಟ ವಿಚಾರವನ್ನು ಸ್ನೇಹಿತರು ಕೂಡಲೇ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ದೌಡಾಯಿಸಿದರು. ನಂತರ ಬೆಟ್ಟದ ತುದಿಯಿಂದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಮೃತದೇಹವನ್ನು ಪೊಲೀಸರು ತಂದಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.