ಕೊಂಬೆ ಕಡಿಯಲು ಹೋದ ಯುವಕ ಮರದಲ್ಲೇ ದುರ್ಮರಣ..!

ಮಡಿಕೇರಿ: ಕಾಫಿ ತೋಟಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಲು ತಡೆಯಾಗಿದ್ದ ಕೊಂಬೆಗಳನ್ನು ಕಡಿಯಲು ಕಾರ್ಮಿಕರೊಬ್ಬರು ಮರವೇರಿದ್ದರು. ಆದರೆ ಹೈಟೆನ್ಷನ್ ವಯರ್ ನಿಂದ ಹರಿದ ವಿದ್ಯುತ್ ಪ್ರವಾಹಕ್ಕೆ ಸಿಲುಕಿ ಮರದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಮಾರುತಿ ನಗರದಲ್ಲಿ ನಡೆದಿದೆ.

ಹೆದ್ದಾರಿ ಬದಿಯಲ್ಲಿರುವ ಶಂಭುರವರಿಗೆ ಸೇರಿದ ತೋಟದಲ್ಲಿ ಈ ದುರ್ಘಟನೆ ನಡೆದಿದ್ದು, ಹೇಮಂತ್ ಕುಮಾರ್ (20) ಮೃತ ದುರ್ದೈವಿ ಯುವಕ. ಅವಿವಾಹಿತನಾಗಿರುವ ಹೇಮಂತ್ ಗುರುವಾರ ಬೆಳಗ್ಗೆ ತೋಟದ ಮಾಲೀಕರು ಕಾಫಿ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುವ ಕೆಲಸಕ್ಕೆ ನಿಯುಕ್ತಿಗೊಳಿಸಿದ್ದರು.

ಸ್ಪ್ರಿಂಕ್ಲರ್ ಅಳವಡಿಸಿದ್ದ ಸ್ಥಳದಲ್ಲಿ ಹಲಸಿನ ಮರವೊಂದಿದ್ದು, ಅದರ ದಟ್ಟವಾದ ಕೊಂಬೆಗಳು ಇನ್ನಿತರ ಕಾಫಿ ಗಿಡಗಳಿಗೆ ನೀರು ಸರಾಗವಾಗಿ ಹಾಯಲು ಬಿಡದೆ ತಡೆಯಾಗಿದ್ದವು. ಹೀಗಾಗಿ ಈ ಕೊಂಬೆಗಳನ್ನು ಕಡಿಯಲೆಂದು ಹೇಮಂತ್ ಮರವೇರಿದ್ದರು. ಅಲ್ಲದೆ ಕೊಂಬೆಗಳನ್ನು ಕಡಿಯುತ್ತಿದ್ದಾಗ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈಟೆನ್ಸನ್ ವಯರ್ ನಿಂದ ವಿದ್ಯುತ್ ಪ್ರವಹಿಸಿದೆ. ಪರಿಣಾಮ ವಿದ್ಯುತ್ ಅಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಹೇಮಂತ್ ಕುಮಾರ್ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದರಿಂದ ಬೇರೆಯವರಿಗೆ ವಿಷಯ ತಿಳಿದಿರಲಿಲ್ಲ. ಮಧ್ಯಾಹ್ನ ಕಳೆದರೂ ಹೇಮಂತ್ ಕುಮಾರ್ ಪತ್ತೆಯಾಗದ ಕಾರಣ ಘಟನಾ ಸ್ಥಳಕ್ಕೆ ಹುಡುಕಿಕೊಂಡು ಬಂದಾಗ ಮರದ ಕೆಳಗೆ ಮೃತದೇಹ ಕಂಡುಬಂದಿದೆ. ಹೇಮಂತ್ ಕುಮಾರ್ ಬೆಳಗ್ಗೆ 10.30ರ ಸಮಯದವರೆಗೂ ಮರದಲ್ಲಿದ್ದುದನ್ನು ಕಂಡವರಿದ್ದಾರೆ. ಆ ನಂತರ ಈ ದುರ್ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *