ಅಪಘಾತದಲ್ಲಿ ಯುವಕ ಸಾವು- ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಮಡಿಕೇರಿ: ಕಳೆದ 5 ದಿನಗಳ ಹಿಂದೆ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ, ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮೂಲಕ  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಪ್ರಜ್ವಲ್ (22) ಸಾವಿಗೀಡಾದ ಯುವಕ. ಈತ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ರೈತ ಸುರೇಶ್ ಅವರ ಮಗನಾಗಿದ್ದನು. ಪ್ರಜ್ವಲ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ.

ಕೂಡ್ಲೂರು ಕೈಗಾರಿಕಾ ಕಾಫಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಜ್ವಲ್, ಭಾನುವಾರ ರಾತ್ರಿ ಕೂಡ್ಲೂರ್ ಕಡೆಯಿಂದ ಕೂಡಿಗೆಗೆ ಹೋಗುತ್ತಿದ್ದ. ಈ ಸಂದರ್ಭ ಕೂಡುಮಂಗಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿತ್ತು. ಪರಿಣಾಮ ಪ್ರಜ್ವಲ್ ತಲೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಗಾಯಾಳುವಿಗೆ ಕುಶಾಲನಗರ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪ್ರಜ್ವಲ್ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸುತ್ತಾರೆ. ಬಳಿಕ ಪ್ರಜ್ವಲ್ ತಂದೆ ತಾಯಿ ಹಾಗೂ ಚಿಕ್ಕಪ್ಪ ಮತ್ತು ಕುಟುಂಬಸ್ಥರು ಪ್ರಜ್ವಲ್‍ನ ಅಂಗಾಂಗ ದಾನ ಮಾಡಲು ನಿರ್ಧರಿಸಿ ಪ್ರಜ್ವಲ್‍ನ ಹೃದಯ ,ಕಣ್ಣು, ಕಿಡ್ನಿ ದಾನ ಮಾಡಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

ಅಂಗಾಗಗಳನ್ನು ದಾನವಾಗಿ ನೀಡಿದ ಬಳಿಕ ಕೂಡಿಗೆಗೆ ಆಗಮಿಸಿದ ಪ್ರಜ್ವಲ್ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು, ಆಟೋ ಚಾಲಕರುಗಳು, ನೂರಾರು ಮಂದಿ ಯುವಕರು ಮೃತದೇಹ ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು.

Comments

Leave a Reply

Your email address will not be published. Required fields are marked *