ಸಿಎಂಗೆ ಹಾಡಿನ ಮೂಲಕ ಕೆರೆಗೆ ನೀರು ಹರಿಸುವಂತೆ ಮನವಿ: ಶಿರಾ ಯುವಕನ ವಿಡಿಯೋ ವೈರಲ್

ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಹಾಡಿನ ಮೂಲಕ ಮನಮುಟ್ಟುವ ರೀತಿಯಲ್ಲಿ ಯುವ ರೈತನೋರ್ವ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಹಲವಾರು ಹೋರಾಟಗಳು ನಡೆದಿದೆ. ರಕ್ತದ ಮೂಲಕ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಮನವಿಯನ್ನೂ ಮಾಡಲಾಗಿದೆ. ಆದರೂ ಸಹ ಇಲ್ಲಿಯವರೆಗೂ ಮದಲೂರು ಕೆರೆಗೆ ಹನಿ ನೀರೂ ಹರಿದಿಲ್ಲ. ಇದರಿಂದ ಬೇಸತ್ತ ಯುವ ರೈತನೋರ್ವ ಹೃದಯ ಮುಟ್ಟವ ರೀತಿಯಲ್ಲಿ ಹಾಡನ್ನು ರಚಿಸಿ ಹಾಡಿರುವ ವಿಡಿಯೋ ಸಾಕಷ್ಟು ಸುದ್ದಿಯಾಗಿದೆ.

ಪೂಜಾರ್ ಮುದ್ದನಹಳ್ಳಿ ಯುವ ರೈತ ಮಂಜುನಾಥ್ ಎಂಬಾತ ಹಿರಿಯ ಗಾಯಕ ಸಿ.ಅಶ್ವಥ್ ಹಾಡಿರುವ “ಒಳಿತು ಮಾಡು ಮನುಸ” ಎಂಬ ಹಾಡಿನ ಸಂಗೀತಕ್ಕೆ ತಾನೇ ಬೇರೆ ಸಾಹಿತ್ಯ ಬರೆದು ಹಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ ರೀತಿಯಲ್ಲಿ ಈ ಹಾಡು ರಚಿಸಿದ್ದಾರೆ. ಅಲ್ಲದೇ ಐದು ನಿಮಿಷ ಸ್ವತಃ ಹಾಡಿರುವ ರೈತನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ನಮ್ಮ ಭಾಗದಲ್ಲಿ ನೀರಿನ ಅಭಾವ ಹೆಚ್ಚಿದ್ದು, ಬೆಳೆ ಬೆಳೆಯಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಸಿಎಂ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಅವರು ರೈತರ ಪರ ಕಾಳಜಿಯನ್ನು ಹೊಂದಿದ್ದಾರೆ. ನಮ್ಮ ಮದಗೂರಿನ ಕೆರೆಗೆ ನೀರು ಹರಿಸುವಂತೆ ಎಷ್ಟೇ ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಹೀಗಾಗಿ ಹಾಡಿನ ಮೂಲಕ ಅವರ ಮನ ಮುಟ್ಟುವಂತೆ ಹಾಡಿದ್ದೇನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *