ನೀನು ಸಾಧಿಸಿಬಿಟ್ಟೆ ಮಚ್ಚಾ: ಕೊಹ್ಲಿ ತಬ್ಬಿಕೊಂಡು ಎಬಿಡಿ ಭಾವುಕ

ಅಹಮದಾಬಾದ್: ವಿರಾಟ್‌ ಕೊಹ್ಲಿ (Virat Kohli) ಮತ್ತು ಎಬಿ ಡಿವಿಲಿಯರ್ಸ್‌ (AB de villiers) ಇಬ್ಬರದ್ದೂ ಬಿಡಿಸಲಾರದ ನಂಟು. ಕುಚಿಕು ಗೆಳೆಯರಿಗಿಂತ ಹೆಚ್ಚು. ಆರ್‌ಸಿಬಿ (RCB) ತಂಡದಲ್ಲಿ ಇವರಿಬ್ಬರ ಸ್ನೇಹದ ಬಗ್ಗೆ ಮಾತನಾಡದವರಿಲ್ಲ. ಆರ್‌ಸಿಬಿ ಟ್ರೋಫಿ ಗೆಲುವಿನ ಖುಷಿಯಲ್ಲಿ ಇವರಿಬ್ಬರು ಸಂಧಿಸಿದ ಸಂದರ್ಭ ನಿಜಕ್ಕೂ ಭಾವುಕ ಕ್ಷಣವಾಗಿತ್ತು.

ರೋಚಕ ಪಂದ್ಯದ ಗೆಲುವಿಗೆ ಎಬಿಡಿ ಕಾತರದಿಂದ ಕಾದು ಕುಳಿತಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಡಿವಿಲಿಯರ್ಸ್‌ ಕೈ ಕೈ ಹಿಸುಕಿಕೊಳ್ಳುತ್ತಿದ್ದ ದೃಶ್ಯವೂ ಕಂಡುಬಂತು. ಇದನ್ನು ಕಂಡು ಅಭಿಮಾನಿಗಳು ಕೂಡ ಗೆಲುವನ್ನು ಹಂಬಲಿಸಿದ್ದರು. ಕೊನೆಗೆ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎಬಿಡಿ ಸಂಭ್ರಮಿಸಿದರು. ಇದನ್ನೂ ಓದಿ: 18 ವರ್ಷ, 18 ಆವೃತ್ತಿ, ನಂ.18 ಜೆರ್ಸಿ – ಹೇಗಿದೆ ಆರ್‌ಸಿಬಿಯ ರೋಚಕ ಇತಿಹಾಸ..?

ಮೈದಾನಕ್ಕೆ ಧಾವಿಸಿ ವಿರಾಟ್‌ ಕೊಹ್ಲಿಯನ್ನು ಎಬಿ ಡಿವಿಲಿಯರ್ಸ್‌ ಅಪ್ಪಿಕೊಂಡು ಕಣ್ಣೀರಿಟ್ಟರು. ನಂತರ ಕೊಹ್ಲಿ ಮುಖವನ್ನು ನೋಡುತ್ತ ‘ನೀನು ಸಾಧಿಸಿಬಿಟ್ಟೆ ಮಚ್ಚ’ ಎಂಬಂಥ ಭಾವನೆಯನ್ನು ತೋರಿದರು. ಈ ಇಬ್ಬರ ನಡುವಿನ ಮನದ ಮಾತು ಕಂಡು ಆರ್‌ಸಿಬಿ ಅಭಿಮಾನಿಗಳು ಕೂಡ ಅರೆ ಕ್ಷಣ ಭಾವುಕರಾದರು. ಇದಪ್ಪಾ ಸ್ನೇಹ ಎನ್ನುವಂತೆ ಮಾತನಾಡಿಕೊಂಡರು.

ಐಪಿಎಲ್‌ ಇತಿಹಾಸದಲ್ಲೇ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಜೋಡಿಯ ಆಟ ಇತಿಹಾಸ ಸೃಷ್ಟಿಸಿದೆ. 2016 ರ ಋತುವಿನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎರಡನೇ ವಿಕೆಟ್‌ಗೆ 229 ರನ್‌ಗಳ ಬೃಹತ್ ಜೊತೆಯಾಟ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪಾಲುದಾರಿಕೆ ದಾಖಲೆಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೊನೆಗೂ ಆರ್‌ಸಿಬಿಗೆ ಸಿಕ್ತು ಕಪ್‌ – ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕೊಹ್ಲಿ

2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಎಂಟ್ರಿ ಆಗುತ್ತಿದ್ದಂತೆ ಭಾರತಕ್ಕೆ ಎಬಿಡಿ ಬಂದಿದ್ದರು. ಫೈನಲ್‌ನಲ್ಲಿ ಆರ್‌ಸಿಬಿ ಗೆಲ್ಲಲಿ ಎಂದು ಹಾರೈಸಿದ್ದರು.