ನೀವೂ ರಾಜ್ಯಕ್ಕೆ ಡೇಂಜರ್- ನೂತನ ನಾಡಧ್ವಜದ ಬಣ್ಣಗಳ ಕುರಿತು ಸಿಎಂ ಗೆ ಪ್ರತಾಪ್ ಸಿಂಹ ಟಾಂಗ್

ಬೆಂಗಳೂರು: ನೂತನ ನಾಡಧ್ವಜಗಳ ಬಣ್ಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ನಾಡ ಧ್ವಜದ ಬಣ್ಣಗಳ ಅರ್ಥದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು. ಈ ಕುರಿತು ಸಿಎಂ ಕಾಲೆಳೆದ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯನವರೇ ನಮ್ಮ ಕನ್ನಡ ಬಾವುಟದ ಬಣ್ಣಗಳು ಅರಿಶಿಣ ಮತ್ತು ಕುಂಕುಮದ ಸಂಕೇತ. ನೀವು ಆ ಬಣ್ಣಗಳಿಗೆ ಬೇರೆ ವಿಕೃತ ಅರ್ಥ ಕಲ್ಪಿಸಬೇಡಿ. ಕೆಂಪು ಡೆಂಜರ್ ಎನ್ನುತ್ತಾರೆ. ನೀವು ಸಹ ಈ ರಾಜ್ಯಕ್ಕೆ ಡೆಂಜರ್ ಆಗಿದ್ದೀರಿ ಅಂತ ಹೇಳಿದ್ದಾರೆ.

ಇತ್ತೀಚೆಗೆ ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ನಾಡಧ್ವಜ ಸಮಿತಿ ನೀಡಿದ್ದ ನಾಡಧ್ವಜವನ್ನೆ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿತ್ತು.ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ನೂತನ ನಾಡಧ್ವಜವನ್ನ ಅನಾವರಣಗೊಳಿಸಿದ್ದರು. ಹಳದಿ, ಬಿಳಿ ಮಧ್ಯೆ ಕರ್ನಾಟಕ ಸರ್ಕಾರದ ಲಾಂಛನ ಕೆಂಪು ಬಣ್ಣದ ತ್ರಿವರ್ಣ ನಾಡಧ್ವಜವನ್ನ ಸಿಎಂ ಪ್ರದರ್ಶನ ಮಾಡಿದ್ದರು. ಹಳದಿ ಸಮೃದ್ಧಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಕೆಂಪು ಸ್ವಾಭಿಮಾನ ಹಾಗೂ ಧೈರ್ಯದ ಸಂಕೇತವಾಗಿದೆ. ನಾಡಧ್ವಜ ರಚಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು.

ಸಮಿತಿ ರಾಜ್ಯದ ಇತಿಹಾಸ, ಕಾನೂನಿನ ಇತಿಮಿತಿಗಳನ್ನ ಅಧ್ಯಯನ ಮಾಡಿ 3 ಬಣ್ಣಗಳ ಧ್ವಜ ನೀಡಿತ್ತು. ಸರ್ಕಾರ ಇದನ್ನ ಒಪ್ಪಿಕೊಂಡು, ನಾಡಧ್ವಜವಾಗಿ ಅಂಗೀಕಾರ ಮಾಡಿದೆ. ಶೀಘ್ರವೇ ನಾಡಧ್ವಜ ಅಂಗೀಕಾರ ಮಾಡುವಂತೆ ಕೇಂದ್ರಕ್ಕೆ ಕಳಿಸಲಾಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಆದ್ರೆ ಈ ನೂತನ ನಾಡಧ್ವಜಕ್ಕೆ ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಯಾವುದೇ ಬಾವುಟ ಮಾಡಲಿ, ನಮ್ಮ ಅಧಿಕೃತ ಬಾವುಟ ಹಳದಿ ಕೆಂಪು. ನಮ್ಮ ಹೋರಾಟ ಹಾಗೂ ಚಳುವಳಿಗೆ ಹಳದಿ ಕೆಂಪು ಬಾವುಟವನ್ನೇ ಮುಂದುವರೆಸುತ್ತೇವೆ ಅಂತ ಹೇಳಿದ್ದರು.

Comments

Leave a Reply

Your email address will not be published. Required fields are marked *