ಪ್ರಚಾರಕ್ಕೆ ನಿಷೇಧ – ಯೋಗಿ ಆದಿತ್ಯನಾಥ್, ಮಯಾವತಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‍ಪಿ ನಾಯಕಿ ಮಯಾವತಿ ಅವರಿಗೆ ಚುನಾವಣಾ ಆಯೋಗ ಚಾಟಿ ಬೀಸಿದೆ.

ಆಯೋಗ ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದು, ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆ ಮತ್ತು ಮಯಾವತಿ ಅವರಿಗೆ 48 ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ಹೇರಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಈ ನಿಷೇಧ ಜಾರಿಗೆ ಬರಲಿದೆ.

ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ಇಬ್ಬರು ಕೂಡ ಆಕ್ಷೇಪರ್ಹ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಕುರಿತಂತೆ ಕ್ರಮಕೈಗೊಳ್ಳದ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ ಇಂತಹ ಪ್ರಕರಣಗಳಿಗೆ ನಾವು ನೋಟಿಸ್ ನೀಡಿ ಕ್ರಮಕ್ಕೆ ಮುಂದಾಬಹುದು ಅಷ್ಟೇ. ಆದರೆ ಅಭ್ಯರ್ಥಿಯನ್ನ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಅಧಿಕಾರ ಇಲ್ಲ ಎಂದು ತಿಳಿಸಿತ್ತು. ಆದರೆ ಆಯೋಗ ಉತ್ತರಕ್ಕೆ ನ್ಯಾಯಾಲಯ ಅಸಮ್ಮತಿ ಸೂಚಿಸಿ ಕ್ರಮಕೈಗೊಳ್ಳಲು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಸದ್ಯ ಆಯೋಗ ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ.

ಆದಿತ್ಯನಾಥ್ ಹೇಳಿದ್ದೇನು?
ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಭಾರತೀಯ ಸೈನ್ಯ `ಮೋದಿ ಸೈನ್ಯ’, ಮುಸ್ಲಿಂ ಲೀಗ್ `ವೈರಸ್’ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಅಲಿ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ನಾವು ಭಜರಂಗಬಲಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಅವರು ಅಲಿಯನ್ನು ಹೊಂದಿದ್ದರೆ, ನಾವು ಭಜರಂಗಬಲಿಯನ್ನು ಹೊಂದಿದ್ದೇವೆ ಎಂದಿದ್ದರು.

ಮಯಾವತಿ ಹೇಳಿದ್ದೇನು?
ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೂ ಕೆಲ ದಿನಗಳ ಮುನ್ನ ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು ಮುಸ್ಲಿಂ ಸಮುದಾಯದ ಬಳಿ ಮತಯಾಚನೆ ಮಾಡಿದ್ದರು. ಈ ವೇಳೆ ಕಾಂಗ್ರೆಸ್ಸಿಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.

ಮಯಾವತಿ ಅವರ ಈ ಹೇಳಿಕೆಗೆ ತಿರುಗೇಟು ನೀಡಲು ಸಿಎಂ ಯೋಗಿ ಆದಿತ್ಯನಾಥ್ ಅವರು ಅಲಿ, ಭಜರಂಗ ಬಲಿ ಹೇಳಿಕೆಯನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *