ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ದೆಹಲಿಗೆ ತೆರಳುವ ಹೊಸ ರೈಲಿಗೆ ಕೇಂದ್ರ ಸಚಿವ ಸದಾನಂದ ಗೌಡರು ಇಂದು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಬೆಂಗಳೂರಿಗೆ ಇವತ್ತು ಸುದಿನ. ದೆಹಲಿಯಿಂದ ಬೆಂಗಳೂರಿಗೆ ರೈಲಿನ ಅಗತ್ಯ ಇತ್ತು. ಇವತ್ತು ಈ ಕೆಲಸ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೇ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಸುಮಾರು 2,500 ಕೋಟಿ ರೂ.ಗಳನ್ನು ವಾರ್ಷಿಕವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದೆ. ನಮ್ಮ ಸರ್ಕಾರ ಬರಿ ಘೋಷಣೆಗಳನ್ನ ಮಾಡುತ್ತಿಲ್ಲ. ಅವುಗಳನ್ನ ಜಾರಿಗೆ ತರುವ ಕಾರ್ಯ ಮಾಡಿದೆ ಎಂದರು.
ಯಶವಂತಪುರ-ದೆಹಲಿ ವರೆಗೆ ಸಂಚಾರಕ್ಕಾಗಿ ರೈಲು ಮಾರ್ಗ ಕಲ್ಪಿಸಲಾಗಿದ್ದು, ಇಂದು ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು.
ಈ ಮೂಲಕ ಜನರಿಗೆ ರೈಲ್ವೆ ಪ್ರಯಾಣ ಅನುಕೂಲ ಆಗಲಿದೆ. pic.twitter.com/4YHOLUVTnR— Sadananda Gowda (@DVSadanandGowda) March 5, 2019
ರಾಷ್ಟ್ರದ ರಾಜಧಾನಿಗೆ ರಾಜ್ಯದ ರಾಜಧಾನಿಯಿಂದ ಹೊರಡುವ ಹೊಸ ರೈಲು ಯಶವಂತಪುರ ಟು ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಇಂದಿನಿಂದ ಆರಂಭವಾಗಿದೆ. ವಾರದಲ್ಲಿ 2 ದಿನಗಳ ಕಾಲ ಹೊಸ ಎಕ್ಸ್ ಪ್ರೆಸ್ ರೈಲು ಪ್ರಯಾಣ ಬೆಳೆಸಲಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಯಶವಂತಪುರದಿಂದ ಮಧ್ಯಾಹ್ನ 12.30ಕ್ಕೆ ಹೊರಡಲಿದ್ದು, 1.38ಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದೆ. ಈ ಹೊಸ ರೈಲ್ವೇ ಸೇವೆ ಲಭ್ಯವಾದ ಪರಿಣಾಮ ಅವಿಭಜಿತ ಕೋಲಾರ ಜಿಲ್ಲೆಯ ಜನತೆಗೆ ಅನುಕೂಲ ಆಗಲಿದ್ದು, ಚಿಕ್ಕಬಳ್ಳಾಪುರ ದಿಂದ ತಿರುಪತಿ ಸೇರಿದಂತೆ ಉತ್ತರ ಭಾಗದ ಅನೇಕ ರಾಜ್ಯಗಳಿಗೆ ಪ್ರಯಾಣಿಸಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಮಾಜಿ ಕೇಂದ್ರ ರೈಲ್ವೆ ಸಚಿವ ಕೆ.ಹೆಚ್.ಮುನಿಯಪ್ಪ, ಮೇಯರ್ ಗಂಗಾಂಭಿಕಾ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply