ಏಸು ಪ್ರತಿಮೆ ನಿರ್ಮಾಣ ವಿವಾದ- ಡಿಕೆಶಿಗೆ ವಿಜಯೇಂದ್ರ ಟ್ವೀಟ್ ಗುದ್ದು

ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲಬೆಟ್ಟದಲ್ಲಿ ಏಸುವಿನ ಪ್ರತಿಮೆ ಬೃಹತ್ ನಿರ್ಮಾಣದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕ್ರಿಸ್ಮಸ್ ದಿನದಂದು ಏಸುವಿನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದಂದಿನಿಂದಲೂ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ನಾಯಕರ ಖಂಡನೆ ನಿರಂತರವಾಗಿ ಮುಂದುವರಿದಿದೆ. ಈ ಸಾಲಿಗೆ ಈಗ ಸಿಎಂ ಪುತ್ರ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಸಹ ಸೇರಿದ್ದಾರೆ. ಇಂದು ಬೆಳಗ್ಗೆ ಬಿ.ವೈ ವಿಜಯೇಂದ್ರ ಎರಡು ಟ್ವೀಟ್ ಗಳನ್ನು ಪೋಸ್ಟ್ ಮಾಡುವ ಮೂಲಕ ಏಸು ಪ್ರತಿಮೆ ನಿರ್ಮಾಣಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆಯೇ ಟ್ವೀಟ್ ಮಾಡಿರುವ ಬಿ.ವೈ ವಿಜಯೇಂದ್ರ, ಕಪಾಲಬೆಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಓಲೈಕೆ ಅಸ್ತ್ರವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ಡಿಕೆಶಿ ನಡೆ ಸರಿಯಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

ಡಿಕೆಶಿಯವರ ಈ ನಡೆಯಿಂದ ನಮ್ಮ ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಅಪಚಾರವಾಗಿದೆ. ಯಾವುದೇ ಸ್ಥಳ ಮಹಿಮೆಯ ಹಿನ್ನೆಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಆದರೆ, ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ಡಿಕೆಶಿಯವರು ಆ ಸ್ಥಳ ಮಹಿಮೆ ಹಿನ್ನೆಲೆ ಏನೆಂದು ತಿಳಿಸಬೇಕಿದೆ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮೊದಲ ಟ್ವೀಟ್ ಬೆನ್ನಲ್ಲೇ ಎರಡನೇ ಟ್ವೀಟ್ ಮಾಡೋ ಮೂಲಕ ಡಿಕೆಶಿಗೆ ವಿಜಯೇಂದ್ರ ಮತ್ತೊಂದು ತಿರುಗೇಟು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಡಿಕೆಶಿ ಹೈಕಮಾಂಡ್ ಓಲೈಸಬೇಕೇ…? ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡ ನಾಡಿನ ವೈಭವದ ಸಂಸ್ಕೃತಿಗೆ ಧಕ್ಕೆತರುವ ಪ್ರಮಾದವನ್ನು ಡಿಕೆಶಿ ಮಾಡುತ್ತಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಬೆನ್ನು ತಟ್ಟಬಹುದು. ಆದರೆ ಜನತೆ ನಿಮ್ಮನ್ನು ಕ್ಷಮಿಸುವರೇ….? ಎಂದು ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *