ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ಹೊಸ ಅಲೆಯ ಚಿತ್ರಗಳ ಹಬ್ಬದಂಥಾ ಕಾಲ. ಈ ಸಾಲಿನಲ್ಲಿಯೇ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೀಗ ನಾನಾ ಥರದಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಚಿತ್ರತಂಡ ಸಾರ್ವಜನಿಕರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿರುವ ಮಜವಾದ ಹಾಡೊಂದನ್ನು ಕೇಳೋ ಸುವರ್ಣಾವಕಾಶ ಕಲ್ಪಿಸಿದೆ. ಪ್ರೀತಿಯಲ್ಲಿ ಏಟು ತಿಂದ ಪಡ್ಡೆಗಳ ತಲೆಯಲ್ಲಿ ವಾಸ್ತವದ ವೇದಾಂತ ಗಿರಕಿ ಹೊಡೆಯುತ್ತದಲ್ಲಾ? ಅಂಥಾ ಭಾವಗಳನ್ನೇ ಬಸಿದುಕೊಂಡಂತಿರೋ ಸಾಹಿತ್ಯವಿರುವ ಈ ಹಾಡು ಇದೀಗ ಬಿಡುಗಡೆಯಾಗಿದೆ. ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದುವರೆಯುತ್ತಿರೋ ಈ ಹಾಡು ಇಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಲಕ್ಷಣಗಳೂ ದಟ್ಟವಾಗಿವೆ.

ಏನು ಸ್ವಾಮಿ ಮಾಡೋಣ ಆಗಿಹೋಯ್ತು ಅದ್ವಾನ ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ ಅಂತ ಶುರುವಾಗೋ ಮಜವಾದ ಈ ಹಾಡು ಆ ನಂತರದಲ್ಲಿ ಬದುಕಿನ ವಾಸ್ತವವನ್ನು ಕೂಡಾ ಅಷ್ಟೇ ಮಜವಾಗಿ ತೆರೆದಿಡುತ್ತದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಮೆಲೋಡಿ ಹಾಡುಗಳ ಮೂಲಕವೇ ಮನಗೆದ್ದಿರೋ ನಾಗೇಂದ್ರ ಪ್ರಸಾದರ ಪಾಂಡಿತ್ಯದ ಮತ್ತೊಂದು ಮಜಲು ಈ ಹಾಡಿನ ಮೂಲಕ ಅನಾವರಣಗೊಂಡಿದೆ. ಈ ಹಾಡು ಪನೀತ್ ರಾಜ್‍ಕುಮಾರ್ ಕಂಠಸಿರಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.

ಈ ಹಾಡಿನಲ್ಲಿ ನಾಯಕ ರಿಷಿಯಂತೂ ಪಡ್ಡೆ ಹುಡುಗರ ಭಾವಾವೇಷವನ್ನು ಆವಾಹಿಸಿಕೊಂಡವರಂತೆ ಹೆಜ್ಜೆ ಹಾಕಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಸಿದ್ದು ಮೂಲಿಮನಿ, ರಂಗಾಯಣ ರಘು, ದತ್ತಣ್ಣ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರೋ ಈ ಸಿನಿಮಾದಲ್ಲಿ ಧನ್ಯಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ಕವಲು ದಾರಿ ಎಂಬ ಸಿನಿಮಾದಲ್ಲಿಯೂ ರಿಷಿಗೆ ಸಾಥ್ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸಂಪೂರ್ಣವಾಗಿ ಭಿನ್ನ ಕಥಾನಕ ಹೊಂದಿರೋ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.

Comments

Leave a Reply

Your email address will not be published. Required fields are marked *