ಬೆಂಗಳೂರು: ಸಾಲಮನ್ನಾ ಮಾಡಲು ಕೇಂದ್ರದ ಸಹಾಯ ಕೇಳಿದ ಸಿಎಂ ಕುಮಾರಸ್ವಾಮಿ ಅವರಿಗೆ ವಿಪಕ್ಷ ನಾಯಕ ಯಡಿಯೂರಪ್ಪ ತಿರುಗೇಟು ನೀಡಿದ್ದು, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಸರ್ಕಾರ ಸಾಲಮನ್ನಾ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ. ಅಲ್ಲಿನ ಸರ್ಕಾರದಂತೆ ರಾಜ್ಯ ಸರ್ಕಾರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ಕೇಂದ್ರ ಸರ್ಕಾರ ಈಗಾಗಲೇ ಸಾಲಮನ್ನಾ ವಿಚಾರ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದು ಎಂದು ಸ್ಪಷ್ಟಪಡಿಸಿದೆ. ಸಾಲಮನ್ನಾಗೆ ಕೇಂದ್ರ ಹಣ ನೀಡಲ್ಲ ಎಂದು ಗೊತ್ತಿದ್ದರೂ ಸಿಎಂ ಕುಮಾರಸ್ವಾಮಿ ಅವರು ಗೊಂದಲ ಮೂಡಿಸಲು ಹೀಗೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಹಲವು ಭರವಸೆ ನೀಡಿ ಸಿಎಂ ಆಗಿದ್ದಾರೆ. ಆದರೆ ಈಗ ಅಪ್ಪ ಮಕ್ಕಳು ನಮಗೆ ಕಡಿಮೆ ಸ್ಥಾನ ಇದೆ. ಕಾಂಗ್ರೆಸ್ ಪಕ್ಷವನ್ನು ಕೇಳಬೇಕು ಎಂದು ಹೇಳುತ್ತಿದ್ದಾರೆ. ಖುರ್ಚಿಗಾಗಿ ಸಿಎಂ ಆಗಿ ಈಗ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಬಜೆಟ್ ಮಂಡನೆ ವಿಚಾರದ ಜಗಳಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ವೈ, ಸಿದ್ದರಾಮಯ್ಯ ಪೂರಕ ಬಜೆಟ್ ಮಂಡಿಸಿ ಅಂತಿದ್ದಾರೆ. ಆದರೆ ಡಿಸಿಎಂ ಸೇರಿ ಕಾಂಗ್ರೆಸ್ ನವರೇ ಬಜೆಟ್ ಮಂಡಿಸಲಿ ಅಂತಿದ್ದಾರೆ. ಇದನ್ನು ನೋಡಿದರೆ ಸರ್ಕಾರ ಗೊಂದಲದ ಗೂಡಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಕೊಟ್ಟ ಭರವಸೆ ಮರೆಯಬಾರದು. ರಾಜ್ಯದ ಜನ ಯಾವಾಗ ಭರವಸೆ ಈಡೇರಿಸುತ್ತಾರೆ ಎಂದು ಕಾದು ನೋಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ರೈತರ ಸಾಲಮನ್ನಾದ ಹಣ ಇನ್ನು ಬಿಡುಗಡೆಯಾಗಿಲ್ಲ. ಯಾವುದೇ ಕಾರಣಕ್ಕೂ ಸಿಎಂ ಕೊಟ್ಟ ಭರವಸೆಯಿಂದ ಹಿಂದೆ ಹೋಗಬಾರದು. ಬಜೆಟ್ ಮುನ್ನ ಜೆಡಿಎಸ್ ಕಾಂಗ್ರೆಸ್ ಪ್ರಣಾಳಿಕೆ ಸಿಎಂ ಓದಬೇಕು. ಬಜೆಟ್ ವರೆಗೂ ನಾವು ಕಾಯುತ್ತೇವೆ. ಒಂದು ವೇಳೆ ಕೊಟ್ಟ ಭರವಸೆ ಈಡೇರಿಸದೇ ಇದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Leave a Reply