ಷರತ್ತು ಒಡ್ಡಿ ಬಿಎಸ್‍ವೈ ಪ್ರಮಾಣ ವಚನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್

ಬೆಂಗಳೂರು: ಬಿ.ಎಸ್.ಯಡಿಯೂರಪ್ಪಗೆ ಸರ್ಕಾರ ರಚನೆಗೆ ಹೈಕಮಾಂಡ್ ದಿಢೀರ್ ಅನುಮತಿ ನೀಡಿದೆ. ಗುರುವಾರದವರೆಗೆ ಸ್ಪೀಕರ್ ನಡೆಯನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದ ಬಿಜೆಪಿ ಹೈಕಮಾಂಡ್ ಈಗ ಕೆಲ ಷರತ್ತುಗಳನ್ನು ಒಡ್ಡಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಹೌದು. ರಾಜ್ಯ ಪರವಾಗಿ ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ವಿಜಯೇಂದ್ರ ಅವರು ದೆಹಲಿಗೆ ತೆರಳಿ ಅಮಿತ್ ಶಾ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಅತೃಪ್ತರ ಬಗ್ಗೆ ಹಲವು ಚರ್ಚೆ ನಡೆದು ಕೊನೆಗೆ ಇಂದು ಬೆಳಗ್ಗೆ ಸರ್ಕಾರ ನಡೆಸಲು ಶಾ ಅನುಮತಿ ನೀಡಿದ್ದಾರೆ.

ಷರತ್ತು ಏನು?
ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಜವಾಬ್ದಾರಿ ಸಂಪೂರ್ಣವಾಗಿ ನೀವೇ ನಿಭಾಯಿಸಬೇಕು. ಈಗ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಸದನದ ಬಲ 221 ಕ್ಕೆ ಕುಸಿದಿದೆ. ಇದರಿಂದ ಬಹುಮತಕ್ಕೆ 112 ಸಂಖ್ಯೆ ಬೇಕಾಗುತ್ತದೆ. ಆದರೆ ಬಿಜೆಪಿ ಬಳಿ ಒಬ್ಬ ಪಕ್ಷೇತರ ಶಾಸಕ ಸೇರಿ ಒಟ್ಟು 106 ಇದೆ. ಇನ್ನುಳಿದ ಸಂಖ್ಯೆಯನ್ನು ನೀವೇ ನಿಭಾಯಿಸಬೇಕು ಎಂದು ಮೊದಲ ಷರತ್ತು ವಿಧಿಸಿದೆ.

ಅತೃಪ್ತ ಶಾಸಕರು ತಮ್ಮ ನಿಲುವನ್ನು ಬದಲಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವೇ ಹೊರಬೇಕು. 2018ರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದೇವೆ. ಹೀಗಾಗಿ ಈ ಬಾರಿ ಯಾವುದೇ ಎಡವಟ್ಟು ಆಗದಂತೆ ನೋಡಿಕೊಳ್ಳಬೇಕು. ಮುಂದೆ ಏನಾದರೂ ಎಡವಟ್ಟುಗಳಾದರೆ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಡ್ಯಾಮೇಜ್ ಆಗಬಹುದು. ಎಲ್ಲಾ ಜವಾಬ್ದಾರಿ ನಿಮ್ಮದೇ ಎಂದು ಯಡಿಯೂರಪ್ಪ ಪಾಳಯಕ್ಕೆ ಹೈಕಮಾಂಡ್ ಎಚ್ಚರಿಕೆ ಕೊಟ್ಟಿದೆ.

ಎಲ್ಲ ಷರತ್ತುಗಳನ್ನು ಒಪ್ಪಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಸರ್ಕಾರ ರಚಿಸಲು ಬಿಎಸ್‍ವೈಗೆ ಅನುಮತಿ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *