ಬಿಎಸ್‍ವೈ ವಿರುದ್ಧ ಆರ್‌ಟಿಐ ಅಸ್ತ್ರ ಪ್ರಯೋಗಕ್ಕೆ ಮುಂದಾದ ಎಚ್‍ಡಿಕೆ

ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಈಗ ಯಡಿಯೂರಪ್ಪ ಅವರ ವಿರುದ್ಧ ತೊಡೆ ತಟ್ಟಿದ್ದಾರೆ.

ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಆರ್‌ಟಿಐ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಇಂದು ರಹಸ್ಯ ಸ್ಥಳದಲ್ಲಿ ಆರ್‌ಟಿಐ ಕಾರ್ಯಕರ್ತರ ಜೊತೆ ಹೆಚ್‍ಡಿಕೆ ಸಭೆ ನಡೆಸಲು ಮುಂದಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಖುದ್ದು ಕುಮಾರಸ್ವಾಮಿ ಪಿಎಯಿಂದ ಆರ್‌ಟಿಐ  ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದು, ಸರ್ಕಾರದ ವಿರುದ್ಧ ದೊಡ್ಡ ದೊಡ್ಡ ದಾಖಲೆ ತೆಗೆಯುವ ಸಂಬಂಧ ಚರ್ಚೆ ನಡೆಸಲಿದ್ದಾರೆ.

ಕಳೆದ ವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ವ್ಯಾಪಾರಕ್ಕೆ ಬಿಡಬೇಡಿ, ಹದ್ದುಬಸ್ತಿನಲ್ಲಿಟ್ಟುಕೊಳ್ಳಿ, ನಾನೂ ಸಾವಿರ ಟ್ವೀಟ್ ಮಾಡಬಲ್ಲೆ ಎಂದು ಪರೋಕ್ಷವಾಗಿ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದರು.

ಇತ್ತೀಚೆಗೆ ಯಲಹಂಕಗೆ ವರ್ಗಾವಣೆ ಮಾಡಿರುವ ರಘುಮೂರ್ತಿ ನನ್ನ ಬಳಿ ಬಂದಿದ್ದ. ಮಿಡೀಯೇಟ್ ಮಾಡಿಕೊಂಡು ನನ್ನ ಬಳಿ ಬಂದಿದ್ದ, ನಾನು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹೀಗಾಗಿ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ, ವ್ಯಾಪಾರ ಮಾಡಲು ಬಿಡಬೇಡಿ. ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ಜೈಲಿಗೆ ಹೋಗಿ ಬಂದಂತೆ ಮತ್ತೆ ಅದೇ ಸ್ಥಾನಕ್ಕೆ ಹೋಗಬೇಕಾಗುತ್ತದೆ ಎಂದು ಬಿಎಸ್‍ವೈ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದರು.

ಟ್ವೀಟ್ ಮಾಡೋದು ಸುಲಭ, ನಾನೂ ಸಹ ಸಾವಿರ ಟ್ವೀಟ್ ಮಾಡಬಲ್ಲೆ ಅದು ಮುಖ್ಯವಲ್ಲ. ನಿಮ್ಮ ಕ್ರಿಯೆ ಕಡೆ ಗಮನ ಕೊಡಿ. ರಘುಪತಿ ಎಂಬವನನ್ನು ವರ್ಗಾವಣೆ ಮಾಡಿಕೊಂಡು ಗೃಹ ಕಚೇರಿಯಲ್ಲಿ ಮಾರ್ಕೆಟ್ ದಂಧೆ ಮಾಡುತ್ತಿದ್ದೀರಾ? ಆ ದಂಧೆನಾ ನನ್ನ ಮಗನ ಕೈಲೂ ನಾನು ಮಾಡಿಸಿಲ್ಲ. ಸರ್ಕಾರ ಬೀಳಿಸೋಕೆ ನಿಮ್ಮ ಮಗ ಸಮಾಜಘಾತುಕ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಲೀಡ್ ತೋರಿಸಿದ್ದರು ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ನಾನು ಯಾವ ರೀತಿ ಬದುಕಬೇಕು ಎಂಬುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಮರ್ಯಾದೆಗೆ ಬದುಕಿರೋರು ನಾವು, ನಿಮ್ಮ ರೀತಿಯಲ್ಲಿ ಬದುಕಿಲ್ಲ. ಟ್ವೀಟ್ ಮಾಡೋದು ಬಿಟ್ಟು ಮರ್ಯಾದೆಯಿಂದ ಬದುಕಲು ಕಲಿಯಿರಿ. ನಿಮಗೆ ಆತ್ಮಸಾಕ್ಷಿ ಇದ್ದರೆ, ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ನಿಮ್ಮ ಹೃದಯಕ್ಕೆ ಪ್ರಶ್ನೆ ಹಾಕಿಕೊಳ್ಳಿ. ಬಿಡಿಎ ಆಯುಕ್ತರನ್ನು ವರ್ಗಾಯಿಸಿಕೊಂಡು ಎಷ್ಟು ಹಣ ಪಡೆದಿದ್ದೀರಿ ಬಹಿರಂಗಪಡಿಸಿ ಎಂದು ಪ್ರಶ್ನೆ ಮಾಡಿದ್ದರು.

Comments

Leave a Reply

Your email address will not be published. Required fields are marked *