ಯಶಸ್ವಿನಿ ಯೋಜನೆಗೆ ಮತ್ತೆ ವಿಘ್ನ – ಅವೈಜ್ಞಾನಿಕ ದರ ನಿಗದಿಗೆ ಫನಾ ಆಕ್ರೋಶ

ಬೆಂಗಳೂರು: ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು (Yashashwini Scheme) ಸರ್ಕಾರ ಮರು ಜಾರಿಗೊಳಿಸಿದೆ. ಮರು ಜಾರಿಯಾದ ಬಳಿಕ ಯಶಸ್ವಿನಿ ಯೋಜನೆಗೆ ಮತ್ತೆ ವಿಘ್ನ ಎದುರಾಗಿದೆ. ಅವೈಜ್ಞಾನಿಕ ದರ ನಿಗದಿಗೆ ಖಾಸಗಿ ಆಸ್ಪತ್ರೆಗಳು (Hospital) ಮತ್ತು ನರ್ಸಿಂಗ್‌ ಹೋಮ್ಸ್ ಅಸೋಸಿಯೇಷನ್ (ಫನಾ) ಆಕ್ರೋಶ ವ್ಯಕ್ತಪಡಿಸಿದ್ದು, ದರ ಹೆಚ್ಚಳ ಮಾಡದೇ ಇದ್ದರೆ ಸೇವೆ ಬಂದ್ ಮಾಡಲು ಮುಂದಾಗಿದೆ.

ರೈತರು (Farmers) ಮತ್ತು ಬಡವರಿಗಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ರಾಜ್ಯ ಸರ್ಕಾರ ಮತ್ತೆ ಜಾರಿಗೊಳಿಸಿದೆ. ನವೆಂಬರ್ 01 ರಿಂದ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿತ್ತು. ಇದೀಗ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆ ಅಡಿಯ ಚಿಕಿತ್ಸೆಯ ದರ ನಿಗದಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಮರುಜಾರಿಯಾಗಿರುವ ಯಶಸ್ವಿನಿ ಯೋಜನೆಯಲ್ಲಿ 2017 ಮತ್ತು 18ಕ್ಕೂ ಮುಂಚೆ ಇದ್ದ ದರಕ್ಕಿಂತ 10 ರಿಂದ 20% ದರ ಇಳಿಕೆ ಮಾಡಿರೋದು ಕೆಂಗಣ್ಣಿಗೆ ಗುರಿಯಾಗಿದೆ. ಈ ಯೋಜನೆ ಅಡಿ ಸುಮಾರು 1,600 ವಿಧದ ಖಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಸದ್ಯದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಬೆಲೆ ಏರಿಕೆ ಜಾಸ್ತಿ ಇದೆ ಹಾಗಾಗಿ ದರ ಏರಿಕೆ ಮಾಡಬೇಕು. ದರ ಏರಿಕೆ ಆಗದೇ ಇದ್ರೆ ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತೆ. ಸರ್ಕಾರ ವೈಜ್ಞಾನಿಕ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

ಯಶಸ್ವಿನಿ ಯೋಜನೆ ಅಡಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಆದರೆ ಖಾಯಿಲೆಯ ತೀವ್ರತೆ ಹೆಚ್ಚಾಗಿರುವ ರೋಗಿಗಳು ಬರ್ತಾರೆ. ಒಂದು ಖಾಯಿಲೆಗೆ 40 ರಿಂದ 50 ಸಾವಿರ ರೂ. ಖರ್ಚಾದರೆ ಸರ್ಕಾರದಿಂದ 25 ಸಾವಿರ ರೂ. ಸಿಗಬಹುದು. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಲಾಸ್ ಆಗುತ್ತೆ. ದರ ಹೆಚ್ಚಳ ಮಾಡದಿದ್ದರೆ ಕೆಲ ಖಾಸಗಿ ಆಸ್ಪತ್ರೆಗಳು ಈ ಯೋಜನೆ ಅಡಿ ಚಿಕಿತ್ಸೆ ಕೊಡದಿರಬಹುದು. ದರ ಹೆಚ್ಚಳ ಮಾಡಬೇಕಾದ್ರೆ ಖಾಸಗಿ ಆಸ್ಪತ್ರೆಗಳ ಅಭಿಪ್ರಾಯ ಪಡೆಯಲೇ ಇಲ್ಲ. ಸರಿಯಾದ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಫನಾದ ಅಧ್ಯಕ್ಷರಾದ ಡಾ.ಪ್ರಸನ್ನ ತಿಳಿಸಿದ್ದಾರೆ.

ವೈಜ್ಞಾನಿಕ ದರ ನಿಗದಿ ಮಾಡದಿದ್ದರೆ ಏನಾಗುತ್ತೆ?
ಸರ್ಕಾರ ವೈಜ್ಞಾನಿಕ ದರ ನಿಗದಿಪಡಿಸದಿದ್ದರೆ ಗುಣಮಟ್ಟದ ಆರೋಗ್ಯ ಸೇವೆ ಸಿಗದಂತಾಗಬಹುದು. ಕೆಲವೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಕೊಡಲು ಆಸ್ಪತ್ರೆಗಳು ನಿರಾಕರಿಸುವ ಸಾಧ್ಯತೆ ಇದೆ. ಕಡಿಮೆ ಪ್ಯಾಕೇಜ್‍ನಿಂದಾಗಿ ಆಸ್ಪತ್ರೆಗಳು ಉದ್ದೇಶಪೂರ್ವಕವಾಗಿ ಚಿಕಿತ್ಸೆ ವಿಳಂಬ ಮಾಡುವ ಸಾಧ್ಯತೆ ಹೆಚ್ಚಿದೆ. ಚಿಕಿತ್ಸಾ ವೆಚ್ಚದ ರೂಪದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದ್ದು ಸರಿಯಾದ ಚಿಕಿತ್ಸೆ ಸಿಗದಿದ್ದರೆ, ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಟ್ಟರೆ ಆಸ್ಪತ್ರೆಗಳ ಜೊತೆ ಜನ ಜಗಳವಾಡುವ ಪರಿಸ್ಥಿತಿಯು ಬರಬಹುದು. ಇದನ್ನೂ ಓದಿ: ಕಾಂಗ್ರೆಸ್ ರೌಡಿಗಳನ್ನ ತಯಾರು ಮಾಡೋ ಫ್ಯಾಕ್ಟರಿ – ಆರ್.ಅಶೋಕ್

ಯಾವಾಗಿಂದ ಸೌಲಭ್ಯ?
ಯಶಸ್ವಿನಿ ಯೋಜನೆಯಲ್ಲಿ ಹೆಸರು ನೋಂದಣಿಯಾದ 15 ದಿನ ಬಳಿಕ ಸದಸ್ಯರಿಗೆ ಪ್ರತ್ಯೇಕ ಸಂಖ್ಯೆ ವಿತರಣೆ ಮಾಡಲಾಗುತ್ತದೆ. ಕಾರ್ಡ್ ವಿತರಣೆಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ ಆ ಬಳಿಕ ಚಿಕಿತ್ಸೆ ಸಿಗುತ್ತದೆ. ಕಾರ್ಡ್ ಇಲ್ಲದಿದ್ದರೂ ವೈಯಕ್ತಿಕ ಸಂಖ್ಯೆ ಆಧರಿಸಿ ಸೌಲಭ್ಯ ಒದಗಿಸಲು ಯಶಸ್ವಿನಿ ಟ್ರಸ್ಟ್ ನಿರ್ಧಾರಿಸಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದವಾಗದ ಕಾರಣ ಜನವರಿಯಿಂದ ಸೇವೆ ನಿರೀಕ್ಷಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *