ಯಮುನಾ ನದಿಗೆ ವಿಷ ಆರೋಪ – ನದಿ ನೀರನ್ನು ಕುಡಿದು ಕೇಜ್ರಿವಾಲ್‌ಗೆ ಟಕ್ಕರ್‌ ಕೊಟ್ಟ ಹರಿಯಾಣ ಸಿಎಂ

ನವದೆಹಲಿ: ಯಮುನಾ ನದಿಗೆ (Yamuna River) ಹರಿಯಾಣ (Haryana) ಸರ್ಕಾರವು ವಿಷಕಾರಿ ರಾಸಾಯನಿಕಗಳನ್ನು ಬೆರೆಸಲು ಯತ್ನಿಸಿದೆ ಎಂಬ ಕೇಜ್ರಿವಾಲ್‌ ಆರೋಪಕ್ಕೆ ಹರಿಯಾಣ ಸಿಎಂ ತಿರುಗೇಟು ನೀಡಿದ್ದಾರೆ. ಸ್ವತಃ ಸಿಎಂ ನಯಾಬ್‌ ಸೈನಿ (Nayab Saini) ಅವರು ನದಿ ನೀರನ್ನು ಕುಡಿದಿದ್ದಾರೆ.

ನಯಾಬ್‌ ಸೈನಿ ಅವರು ದೆಹಲಿಯ ಪಲ್ಲಾ ಗ್ರಾಮ ದಾಟಿ ಹರಿಯುತ್ತಿದ್ದ ನದಿಯಿಂದ ನೀರನ್ನು ತೆಗೆದುಕೊಂಡು ಸೇವಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ನಾನು ಹರಿಯಾಣ ಗಡಿಯಲ್ಲಿ ಪವಿತ್ರ ಯಮುನೆಯ ನೀರನ್ನು ಕುಡಿದೆ. ದೆಹಲಿ ಸಿಎಂ ಅತಿಶಿ ಅವರು ಬಂದಿಲ್ಲ. ಅವರು ಸುಳ್ಳು ಹೇಳುತ್ತಿರಬೇಕು. ಎಎಪಿಯ ಸುಳ್ಳು ಕೆಲಸ ಮಾಡಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಕುಂಭಮೇಳದಿಂದ ವಾಪಸ್ ಆಗುವಾಗ ರಸ್ತೆ ಅಪಘಾತ – ಮೈಸೂರಿನ ಇಬ್ಬರು ದುರ್ಮರಣ

ದೆಹಲಿಯ ದೇವರಂತಹ ಜನರು ಈ ವಂಚಕರನ್ನು (ಎಎಪಿ) ಗುರುತಿಸಿದ್ದಾರೆ. ಫೆ.5 ರಂದು (ದೆಹಲಿ ಮತ ಚಲಾಯಿಸಿದಾಗ) ಎಎಪಿಯ ವಂಚನೆಯ ಯುಗ ಅಂತ್ಯಗೊಳ್ಳುವುದು ನಿಶ್ಚಿತ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೈನಿ ಅವರು ನದಿ ನೀರನ್ನು ಕುಡಿಯುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 57 ಸೆಕೆಂಡ್‌ ಇರುವ ವೀಡಿಯೋದಲ್ಲಿ, ಸೈನಿ ಅವರು ಬೊಗಸೆಯಲ್ಲಿ ನದಿ ನೀರನ್ನು ತೆಗೆದುಕೊಂಡು ಕುಡಿಯುತ್ತಾರೆ. ನಂತರ ಮೈಗೆ ನೀರನ್ನು ಚಿಮುಕಿಸಿಕೊಳ್ಳುತ್ತಾರೆ. ಇದನ್ನೂ ಓದಿ: ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್‌

ರಾಷ್ಟ್ರ ರಾಜಧಾನಿಗೆ ಸರಬರಾಜು ಮಾಡುವ ನೀರಿನಲ್ಲಿ ವಿಷ ಬೆರೆಸಿದ್ದಾರೆಂದು ಸೈನಿ ಸರ್ಕಾರದ ವಿರುದ್ಧ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತು. ಕೇಜ್ರಿವಾಲ್‌ ಅವರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡು, ನಿಮ್ಮ ಆರೋಪಕ್ಕೆ ಪುರಾವೆ ಇದೆಯೇ ಎಂದು ಪ್ರಶ್ನಿಸಿತ್ತು.