ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್‌ ಗುರುತು ಪತ್ತೆ!

ಟೆಲ್‌ ಅವೀವ್‌: ದಕ್ಷಿಣ ಗಾಜಾದಲ್ಲಿ (Gaza) ಇಸ್ರೇಲ್‌ (Israel) ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ( Hamas )ನಾಯಕ ಯಾಹ್ಯಾ ಸಿನ್ವಾರ್‌ (Yahya Sinwar) ಹತ್ಯೆಯಾಗಿದ್ದಾನೆ.

ಸಿನ್ವಾರ್‌ ಇಸ್ರೇಲ್‌ ಮೇಲೆ ಕಳೆದ ವರ್ಷ ಅ.7ರಂದು ನಡೆದಿದ್ದ ದಾಳಿಯ ಸಂಚುಕೋರ. ಆತನಿಗಾಗಿ ಇಸ್ರೇಲ್‌ ಮಾಹಿತಿ ಕಲೆ ಹಾಕುತ್ತಿತ್ತು. ಈ ಸಂಬಂಧ ಹಲವಾರು ಅಡಗುದಾಣಗಳ ಮಾಹಿತಿ ಇಸ್ರೇಲ್‌ಗೆ ಸಿಕ್ಕಿತ್ತು. ಇಸ್ರೇಲ್‌ ಕಮಾಂಡರ್‌ಗಳ ಒಂದು ಘಟಕ ದಕ್ಷಿಣ ಗಾಜಾದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ಸಿನ್ವಾರ್‌ನನ್ನು ಅನಿರೀಕ್ಷಿತವಾಗಿ ಎದುರಿಸಿತ್ತು.

ಸಿನ್ವಾರ್ ಸಿಕ್ಕಿದ್ದೆಲ್ಲಿ?
ಇಸ್ರೇಲಿ ಘಟಕವು ಬುಧವಾರ ದಕ್ಷಿಣ ಗಾಜಾದಲ್ಲಿ ಗಸ್ತು ತಿರುಗುತ್ತಿದ್ದಾಗ ಇಸ್ರೇಲ್‌ ಪಡೆಗೆ ಹಮಾಸ್‌ ಉಗ್ರರ ಗುಂಪು ಎದುರಾಗಿದೆ. ಈ ವೇಳೆ ಡ್ರೋನ್‌ಗಳ ಸಹಾಯದಿಂದ ಉಗ್ರರ ಮೇಲೆ ದಾಳಿ ನಡೆದಿದೆ. ಈ ಸಮಯದಲ್ಲಿ ಸಿನ್ವಾರ್ ಪಾಳುಬಿದ್ದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ. ಇಸ್ರೇಲಿ ಪಡೆಗಳು ಕಟ್ಟಡವನ್ನು ಗುರಿಯಾಗಿಟ್ಟುಕೊಂಡು ಟ್ಯಾಂಕ್ ಶೆಲ್‌ಗಳು ಮತ್ತು ಕ್ಷಿಪಣಿ ದಾಳಿ ನಡೆಸಿದ್ದವು.

ದಾಳಿಯಲ್ಲಿ ಮೂವರು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಹತ್ಯೆಗೀಡಾಗಿದ್ದರು. ಈ ವೇಳೆ ಇಸ್ರೇಲ್‌ ಸೈನಿಕರು ಓರ್ವನ ಮೃತದೇಹವನ್ನು ಸಿನ್ವಾರ್‌ನದ್ದು ಎಂದು ಶಂಕಿಸಿದ್ದರು.

ವೈದ್ಯಕೀಯ ದಾಖಲೆಗಳಿಂದ ಗುರುತು
1980ರ ದಶಕದ ಅಂತ್ಯದಿಂದ 2011 ರವರೆಗೆ ಇಸ್ರೇಲ್‌ನಲ್ಲಿ ಸಿನ್ವಾರ್ ಸೆರೆವಾಸದಲ್ಲಿದ್ದ. ಈ ವೇಳೆ ಆತನ ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಒಬ್ಬ ಇಸ್ರೇಲಿ ಶಸ್ತ್ರಚಿಕಿತ್ಸಕ ಆತನಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದ. ಈ ವೇಳೆ ಕಲೆ ಹಾಕಿದ್ದ ವೈದ್ಯಕೀಯ ದಾಖಲೆಗಳು ಆತನ ಗುರುತನ್ನು ಪತ್ತೆಹಚ್ಚಲು ಸಹಕಾರಿಯಾಗಿವೆ. ಆತನ ಡಿಎನ್‌ಎ ಟೆಸ್ಟ್‌ ಬಳಿಕ ಸಾವನ್ನು ದೃಢಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿನ್ವಾರ್‌ ತನ್ನ ಸ್ವಂತ ಸುರಕ್ಷತೆಗಾಗಿ ಮತ್ತು ಹತ್ಯೆಯನ್ನು ತಪ್ಪಿಸಲು ಇಸ್ರೇಲಿ ಒತ್ತೆಯಾಳುಗಳೊಂದಿಗೆ ಭೂಗತನಾಗಿದ್ದ ಎಂದು ನಂಬಲಾಗಿತ್ತು. ಇಂದು (ಶುಕ್ರವಾರ) ಹಮಾಸ್ ಸಿನ್ವಾರ್ ಸಾವನ್ನು ದೃಢಪಡಿಸಿದೆ.

ಸಿನ್ವಾರ್‌ನ ಮೃತದೇಹದ ಫೋಟೋಗಳು ವೈರಲ್‌ ಆಗಿದ್ದು, ಅದರ ಮೇಲೆ ಹಲವಾರು ಗಾಯದ ಗುರುತುಗಳು ಪತ್ತೆಯಾಗಿದೆ. ಆತನ ಕಣ್ಣುಗಳ ಬಳಿ ಇರುವ ವಿಶಿಷ್ಟವಾದ ಮಚ್ಚೆಗಳು ಮತ್ತು ಬಾಗಿದ ಹಲ್ಲುಗಳನ್ನು ನೋಡಬಹುದಾಗಿದೆ.