ಕಡು ಬಡತನಕ್ಕೆ ಸೆಡ್ಡು ಹೊಡೆದು ಯುವಕ ಸೇನೆಗೆ ಆಯ್ಕೆ

ಯಾದಗಿರಿ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಎಲ್ಲರಿಗೂ ಇರುತ್ತೆ. ಕೆಲವರು ಅದರಲ್ಲಿ ಯಶಸ್ಸು ಕಾಣುತ್ತಾರೆ. ಇನ್ನೂ ಕೆಲವರಿಗೆ ಬಡತನ ಅಡ್ಡಿಯಾಗುತ್ತದೆ. ಆದರೆ ಯಾದಗಿರಿಯ ಯುವಕರೊಬ್ಬರು ತಮ್ಮ ಕಡು ಬಡತನಕ್ಕೆ ಸೆಡ್ಡು ಹೊಡೆದು ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ.

ಹೌದು. ಯಾದಗಿರಿ ತಾಲೂಕಿನ ಸಾವೂರು ಎಂಬ ಪುಟ್ಟ ಗ್ರಾಮದ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಫಕೀರಪ್ಪ ತನ್ನ ಬಡತನವನ್ನು ಮೆಟ್ಟಿನಿಂತಿದ್ದಾರೆ. ಕಷ್ಟಪಟ್ಟು ಓದಿ ಇದೀಗ ಸೈನ್ಯಕ್ಕೆ ಆಯ್ಕೆ ಆಗಿದ್ದಾರೆ.

ಫಕೀರಪ್ಪ ಗ್ರಾಮದ ಹಗಲು ವೇಷಗಾರರ ಹುಸೇನಪ್ಪ ಮತ್ತು ಅನಂತಮ್ಮನ ಮಗ. ಈ ದಂಪತಿಯ 6 ಮಕ್ಕಳ ಪೈಕಿ ಫಕೀರಪ್ಪ 4 ನೇಯವರು. ಹುಸೇನಪ್ಪ ಕುಟುಂಬ ಸಣ್ಣ ಜೊಪಡಿಯಲ್ಲಿ ವಾಸ ಮಾಡುತ್ತಿದೆ. ವಿವಿಧ ಹಗಲು ವೇಷಗಳನ್ನು ಹಾಕಿಕೊಂಡು ಬಡತನದ ನಡುವೆಯೇ ಮಗನನ್ನು ಬಿಎ ಪದವಿ ಓದಿಸಿ, ಇದೀಗ ದೇಶ ಕಾಯುವ ಸೈನಿಕನನ್ನಾಗಿ ಮಾಡಿದ್ದಾರೆ.

ಫಕೀರಪ್ಪ ಕೂಡ ತನ್ನ ಬಡತನಕ್ಕೆ ಸೆಡ್ಡು ಹೊಡೆದು ಸತತ ಮೂರು ಬಾರಿ ಪ್ರಯತ್ನಿಸಿ ನಾಲ್ಕನೆಯ ಬಾರಿಗೆ ಸೇನೆ ಆಯ್ಕೆ ಆಗಿದ್ದಾರೆ. ಗ್ರಾಮಸ್ಥರು ಫಕೀರಪ್ಪನ್ನ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *