ಬಡವರಿಗೆ ಅವಧಿ ಮುಗಿದ ತೊಗರಿ- ಯಾದಗಿರಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ

ಯಾದಗಿರಿ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ರಾಜ್ಯವನ್ನು ಹಸಿವುಮುಕ್ತ ರಾಜ್ಯ ಮಾಡಲಾಗಿದೆ ಎಂದು ಹೇಳುತ್ತಿದೆ. ಇನ್ನು ಸಿಎಂ ಸಿದ್ದರಾಮಯ್ಯ ಚುನಾವಣೆ ಪ್ರಚಾರದಲ್ಲಿ ಕೂಡ ಅನ್ನಭಾಗ್ಯ ಯೋಜನೆ ಬಡ ಜನರ ಹೊಟ್ಟೆ ತುಂಬಿಸುತ್ತಿದೆ ಎಂದು ಭಾಷಣ ಮಾಡಿ ಜನರ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ಅನ್ನಭಾಗ್ಯ ಯೋಜನೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಸಿವುಮುಕ್ತ ಕರ್ನಾಟಕ ಮಾಡಲು ಬಡವರಿಗೆ ಅವಧಿ ಮುಗಿದ ಬೇಳೆಕಾಳುಗಳ ಪ್ಯಾಕೆಟ್ ಕೊಟ್ಟಿದೆ. ಪ್ರತಿ ಕೆಜಿಗೆ 25 ರೂಪಾಯಿ ಪಡೆದು ಜಿಲ್ಲೆಯ ಸುಮಾರು 2 ಲಕ್ಷ ಬಿಪಿಎಲ್ ಕಾರ್ಡ್‍ದಾರರಿಗೆ ತೊಗರಿ ವಿತರಿಸಲಾಗಿದೆ.

ಕಳೆದ ಆಗಸ್ಟ್‍ನಲ್ಲಿ ತೊಗರಿಕಾಳು ಪ್ಯಾಕಿಂಗ್ ಮಾಡಲಾಗಿದ್ದು, 3 ತಿಂಗಳೊಳಗೆ ಉಪಯೋಗಿಸಬೇಕೆಂದು ಮುದ್ರಿಸಲಾಗಿದೆ. ಆದ್ರೆ ತಡವಾಗಿ ಎಚ್ಚೆತ್ತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 6 ತಿಂಗಳುಗಳ ಬಳಿಕ ವಿತರಣೆ ಮಾಡುತ್ತಿದೆ. ಈ ಬಗ್ಗೆ ಕೇಳಿದ್ರೆ ತೊಗರಿಕಾಳು ಊಟಕ್ಕೆ ಬಳಸಬಹುದು. ಯಾವುದೇ ಸಮಸ್ಯೆಯಿಲ್ಲ ಅಂತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗಭೂಷಣ ಹೇಳುತ್ತಿದ್ದಾರೆ.

ಹಸಿವು ಮುಕ್ತ ಕರ್ನಾಟಕ ಮಾಡಲು ಬಡವರಿಗೆ ಹೀಗೆ ಅವಧಿ ಮುಗಿದ ತೊಗರಿ ಕಾಳು ವಿತರಿಸೋದು ಎಷ್ಟು ಸರಿ ಅನ್ನೋದು ಜನರ ಪ್ರಶ್ನೆಯಾಗಿದೆ.

Comments

Leave a Reply

Your email address will not be published. Required fields are marked *