ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

ಯಾದಗಿರಿ: ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಸಂತ್ರಸ್ತರ ನೆರವಿಗೆ ಸರ್ಕಾರ ಮತ್ತು ರಾಜ್ಯದ ಜನತೆ ಮುಂದಾಗಿದ್ದಾರೆ. ಸರ್ಕಾರ ಸಹ ಕೂಡಲೇ ಸಂತ್ರಸ್ತರಿಗೆ ಪರಿಹಾರದ ವಿತರಣೆ ಆಗಬೇಕೆಂದು ಹೇಳಿದೆ. ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಹಾರದ ಹಣ ಸಂತ್ರಸ್ತರಿಗೆ ಕೈಗೆ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾದಗಿರಿ ಜಿಲ್ಲೆಯ ವಡಗೇರಾ, ಶಹಾಪುರ ತಾಲೂಕಿನಲ್ಲಿ ನೆರೆಹಾವಳಿಯಿಂದಾಗಿ ಯಕ್ಷಚಿಂತಿ, ಗೌಡೂರು, ಚನ್ನೂರು, ಕೊಳ್ಳೂರು ಗ್ರಾಮಗಳು ಜಲಾವೃತವಾಗಿದ್ದವು. ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಹುಣಸಗಿ ತಾಲೂಕಿನ ಜುಮಲಾಪುರ ತಾಂಡಗಳ ಸೇತುವೆ ಕೊಚ್ಚಿ ಹೋಗಿದ್ದವು. ಅಧಿಕಾರಿಯ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ಇದೂವರೆಗೂ ಪರಿಹಾರ ಸಿಕ್ಕಿಲ್ಲ.

ಯಾದಗಿರಿ ಜಿಲ್ಲಾಡಳಿತದ ಪ್ರಕಾರ 339 ಮನೆಗಳಿಗೆ ಪರಿಹಾರ ನೀಡಲಾಗಿದೆ. ಈ ಪರಿಹಾರ ಕೇವಲ ಕಾಗದದ ಮೇಲಿದೆ, ಹೊರತು ಸಂತ್ರಸ್ತರಿಗೆ ತಲುಪಿಲ್ಲ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಪರಿಹಾರ ಯಾಕೆ ತಲುಪಿಲ್ಲ ಎಂಬ ವಿಚಾರ ಬಯಲಾಗಿದೆ. ಅಧಿಕಾರಿಯ ಎಡವಟ್ಟಿನಿಂದಾಗಿ ಗಂಡನ ಹೆಸರು ಹೆಂಡತಿಗೆ, ಒಬ್ಬರ ಚೆಕ್‍ನಲ್ಲಿ ಮತ್ಯಾರದೋ ಹೆಸರು ಹಾಕಲಾಗಿದೆ. ಪರಿಹಾರದ ಚೆಕ್ ನೀಡಿದ್ದರೂ ಸಿಕ್ಕಾಪಟ್ಟೆ ಲೋಪದೋಷಗಳಿಂದ ಕೂಡಿದೆ. ಚೆಕ್ ದೊರೆತರೂ ಹಣ ಸಿಗುತ್ತಾ ಎಂಬ ಪ್ರಶ್ನೆ ನಿರಾಶ್ರಿತರಲ್ಲಿ ಮನೆ ಮಾಡಿದೆ.

ಯಕ್ಷಿಚಿಂತಿ ಗ್ರಾಮ ಲೆಕ್ಕಿಗ ಪ್ರವೀಣ್ ಮತ್ತು ವಡಗೇರಾ ತಹಶೀಲ್ದಾರ್ ಸಂತೋಷ್ ರಾಣಿಯವರ ಬೇಜವಾಬ್ದಾರಿ ಕೆಲಸದಿಂದ ಪ್ರವಾಹ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗೆ ಮೇಲೆ ಕಾಣಿಸದಂತೆ ಸಂತ್ರಸ್ತರ ಹೆಸರುಗಳನ್ನು ತಪ್ಪಾಗಿ ನಮೂದಿಸಿಕೊಂಡಿದ್ದಾರೆ.

ಯಾದಗಿರಿಯ ವಡಗೇರಾ, ಶಹಾಪುರ, ಸುರಪುರ, ಹುಣಸಗಿ ತಾಲೂಕುಗಳು ಪ್ರವಾಹ ಬಾಧಿತವಾಗಿದ್ದು, 339 ಕುಟುಂಬಗಳು ಮನೆ ಕಳೆದುಕೊಂಡಿವೆ. ಅಧಿಕಾರಿಗಳು ಸರ್ವೇ ಮಾಡಿ, ವರದಿಯನ್ನು ಸಿದ್ಧ ಪಡಿಸಿ ಪರಿಹಾರದ ಚೆಕ್ ಲೋಪದೋಷದಿಂದ ಕೂಡಿದೆ. ಹೀಗಾಗಿ ವಡಗೇರಾದ ಯಕ್ಷಚಿಂತಿ ಗ್ರಾಮದಲ್ಲಿ ಸುಮಾರು 100ಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಮರೀಚಿಕೆ ಆಗಿದೆ. ಇಷ್ಟು ಮಾತ್ರವಲ್ಲದೇ ಅರ್ಹ ಸಂತ್ರಸ್ತರನ್ನು ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಸಹ ಕೇಳಿ ಬಂದಿವೆ.

ಎರಡು ಕಂತಿನಲ್ಲಿ 10 ಸಾವಿರ ರೂ. ಪರಿಹಾರದ ಹಣ ಹಂಚಿಕೆಯಾಗಲಿದೆ. 3,800 ರೂ. ಚೆಕ್ ನಲ್ಲಿ ಮತ್ತು ಉಳಿದ ಮೊತ್ತ ಸಂತ್ರಸ್ತರ ಖಾತೆಗೆ ನೇರವಾಗಿ ಜಮೆ ಆಗಲಿದೆ. ವಡಗೇರಾ ಹೊಸ ತಾಲೂಕು ಆಗಿದ್ದರಿಂದ ತಹಶೀಲ್ದಾರ್ ಇನ್ನೂ ಖಜಾನೆಯ ಸಹಿ ಹಕ್ಕು ಕೊಟ್ಟಿಲ್ಲ. ಹಾಗಾಗಿ ಪ್ರತಿಯೊಂದು ಪರಿಹಾರಕ್ಕೂ ಶಹಾಪುರದ ಅಧಿಕಾರಿಗಳ ಗಮನಕ್ಕೆ ತರಬೇಕು. ಈ ಎಲ್ಲ ಕಾರಣಗಳಿಂದ ವಡಗೇರಾದ ಯಕ್ಷಚಿಂತಿ ಗ್ರಾಮದಲ್ಲಿ ಪರಿಹಾರ ವಿಳಂಬವಾಗುತ್ತಿದೆ.

Comments

Leave a Reply

Your email address will not be published. Required fields are marked *