ರಾಮಾ ರಾಮಾ ರೇ ನಿರ್ದೇಶಕನ ‘ಎಕ್ಸ್ ಅಂಡ್ ವೈ’ ಚಿತ್ರ

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯ ಪ್ರಕಾಶ್‌ ಚಿತ್ರ ಸೆಟ್ಟೇರಿತು ಎಂದರೆ ಏನಾದರೊಂದಷ್ಟು ವಿಶೇಷತೆಗಳನ್ನು ಹೊಂದಿರುತ್ತದೆ ಎಂದು ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಮಂದಿ ಎದುರು ನೋಡುತ್ತಾರೆ. ಅದನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಸತ್ಯ. ಬಹಳ ದಿನಗಳ ನಂತರ ಈಗ ಅಳೆದು ತೂಗಿ ಅತ್ಯಾಪ್ತ ಕಥೆ ಮಾಡಿಕೊಂಡು ಅದಕ್ಕೆ “ಎಕ್ಸ್ ಅಂಡ್‌ ವೈ”  (X and Y) ಎಂದು ಶೀರ್ಷಿಕೆ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ.

ತಮ್ಮ ಹಿಂದಿನ ಮೂರು ಚಿತ್ರಗಳಲ್ಲಿ ಮೂಡಿಸಿದ ವಿಶೇಷತೆಗಳಂತೆ ಇಲ್ಲೂ ಚಿತ್ರದ ಟೈಟಲ್‌, ಆರಿಸಿಕೊಂಡ ಕಥೆ, ಲೊಕೇಶನ್ಸ್‌, ಕಲಾವಿದರ ಆಯ್ಕೆಯಲ್ಲದೆ ತಾವೇ ಮುಖ್ಯ ಪಾತ್ರಧಾರಿಯಾಗಿ ನಟನೆಗೆ ಇಳಿದಿದ್ದಾರೆ. ಇದೇ ನವೆಂಬರ್‌ 24ರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಜಯನಗರದ ತಮ್ಮದೇ ಕಚೇರಿಯಲ್ಲಿ ಸ್ನೇಹಿತರು, ಕಲಾವಿದರು, ಹಾಗೂ ತಮ್ಮ ತಂಡದ ತಂತ್ರಜ್ಞರನ್ನೊಳಗೂಡಿ ಸತ್ಯ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಮುಹೂರ್ತ ಮುಗಿಸಿಕೊಂಡಿದ್ದಾರೆ.

 

ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್‌ (Sathyaprakash) ಹಾಗೂ ಅಥರ್ವ ಪ್ರಕಾಶ್‌ (Atharva Prakash) ನಾಯಕರಾಗಿ ಅಭಿನಯಿಸುತ್ತಿದ್ದು ಲವಿತ್‌ ಛಾಯಾಗ್ರಹಣ, ವಾಸುಕಿ ವೈಭವ್‌ ಸಂಗೀತ ನರ್ದೇಶನ, ಬಿ.ಎಸ್‌ ಕೆಂಪರಾಜು ಅವರ ಸಂಕಲನ ಇದೆ. ವರದರಾಜ್‌ ಕಾಮತ್‌ ಕಲಾನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತ ಮುತ್ತಣ ಪರಿಸರದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಸತ್ಯಪ್ರಕಾಶ್‌ ತಿಳಿಸಿದ್ದಾರೆ.