ವಾರಿಯರ್ಸ್ ಮೇಲೆ ಜೈಂಟ್ಸ್ ಸವಾರಿ; 6 ವಿಕೆಟ್‌ಗಳ ಜಯ – ಗೆಲುವಿನ ಖಾತೆ ತೆರೆದ ಗುಜರಾತ್

ವಡೋದರಾ: ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (WPL) 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ತಂಡ ಯುಪಿ ವಾರಿಯರ್ಸ್ (UP Warriorz) ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯಗಳಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಂಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಗುಜರಾತ್ ತಂಡಕ್ಕೆ 144 ರನ್ ಗಳ ಗುರಿ ನೀಡಿತು.

144 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡ 4 ವಿಕೆಟ್‌ ನಷ್ಟಕ್ಕೆ 144 ರನ್ ಗಳಿಸಿ ಗೆಲುವು ಕಂಡಿತು. ಗುಜರಾತ್ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ 5 ಫೋರ್ ಹಾಗೂ 3 ಸಿಕ್ಸ್ ಸಿಡಿಸುವ ಮೂಲಕ 29 ಎಸೆತಗಳಿಗೆ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಒಟ್ಟು 32 ಎಸೆತಗಳಿಗೆ 52 ರನ್ ಗಳಿಸಿ ಆಶ್ಲೇ ಗಾರ್ಡ್ನರ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹರ್ಲಿನ್‌ ಡಿಯೋಲ್‌ ಅಯೇಜ 34 ರನ್‌, ಡಿಯಾಂಡ್ರ ಡಾಟಿನ್ ಅಜೇಯ 33 ರನ್‌ ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಆಡಿದ ಯುಪಿ ವಾರಿಯರ್ಸ್ ತಂಡದ ನಾಯಕಿ ದೀಪ್ತಿ ಶರ್ಮ ಆರು ಫೋರ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಈ ಮೂಲಕ 27 ಎಸೆತಗಳಿಗೆ 39 ರನ್ ಗಳಿಸಿ ದೀಪ್ತಿ ವಿಕೆಟ್ ಒಪ್ಪಿಸಿದರು. ಉಮಾ ಚೇಟ್ರಿ 4 ಫೋರ್ ಸಿಡಿಸಿ 27 ಎಸೆತಗಳಿಗೆ 24 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಲಾನ ಕಿಂಗ್ 14 ಬಾಲ್‌ಗಳಿಗೆ 19 ರನ್‌ಗಳಿಸಿ ಔಟಾಗದೇ 20 ಓವರ್ ಮುಗಿಸಿದರು.