ಐಪಿಎಲ್ ನಗದು ಬಹುಮಾನದಲ್ಲಿ ಶೇ.50ರಷ್ಟು ಕಡಿತ- ಬಿಸಿಸಿಐ ಹೇಳಿದ್ದೇನು?

ಮುಂಬೈ: ಭಾರತದ ಆರ್ಥಿಕ ಹಿಂಜರಿತದ ಬಿಸಿ ಐಪಿಎಲ್‍ಗೂ ತಟ್ಟಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿರುವ ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುಮಾನದ ಮೊತ್ತಕ್ಕೆ ಕತ್ತರಿ ಪ್ರಯೋಗ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೂಲಗಳ ಮಾಹಿತಿಯ ಅನ್ವಯ 2020ರ ಐಪಿಎಲ್ ಟೂರ್ನಿಯ ಬಹುಮಾನದ ಮೊತ್ತ ಶೇ.50 ರಷ್ಟು ಕಡಿಮೆಯಾಗಿದ್ದು, ಐಪಿಎಲ್ ಪ್ರಶಸ್ತಿ ಗೆದ್ದ ತಂಡಕ್ಕೆ ನೀಡಲಾಗುತ್ತಿದ್ದ 20 ಕೋಟಿ ರೂ. ಬಹುಮಾನದ ಬದಲಾಗಿ 10 ಕೋಟಿ ರೂ. ನಿಗದಿ ಮಾಡಿದೆ. ಉಳಿದಂತೆ ರನ್ನರ್ ಅಪ್‍ಗೆ 6.25 ಕೋಟಿ ರೂ. ಹಾಗೂ 3 ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ತಲಾ 4.375 ಕೋಟಿ ರೂ. ನೀಡಲಾಗುತ್ತದೆ ಎನ್ನಲಾಗಿದೆ.

ಮಾರ್ಚ್ 29 ರಿಂದ ಈ ಸಾಲಿನ ಐಪಿಎಲ್ ಆವೃತ್ತಿ ಆರಂಭವಾಗಲಿದ್ದು, ಈಗಾಗಲೇ ಟೂರ್ನಿಯ ವೇಳಾಪಟ್ಟಿಯೂ ಘೋಷಣೆಯಾಗಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಮುಂಬೈ ತಂಡ 20 ಕೋಟಿ ರೂ. ನಗದು ಬಹುಮಾನವನ್ನು ಪಡೆದಿತ್ತು. ಐಪಿಎಲ್ ಟೂರ್ನಿಯಿಂದ ಬಿಸಿಸಿಐ ಅಧಿಕ ಮೊತ್ತದ ಆದಾಯವನ್ನು ಪಡೆಯುತ್ತಿದೆ. ಆದರೆ ಟೂರ್ನಿಯಲ್ಲಿ ಭಾಗಿಯಾಗುವ ಫ್ರಾಂಚೈಸಿಗಳು ಕೂಡ ಆರ್ಥಿಕವಾಗಿ ಬಲಿಷ್ಠವಾಗಿರುವುದರಿಂದ ಭಾರೀ ಮೊತ್ತದ ನಗದು ಬಹುಮಾನ ನೀಡುವ ಅಗತ್ಯವಿಲ್ಲ ಎಂಬುವುದು ಬಿಸಿಸಿಐ ಚಿಂತನೆಯಾಗಿದೆ ಎನ್ನಲಾಗಿದೆ.

ಈ ಹಿಂದಿನ ಟೂರ್ನಿಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಫ್ರಾಂಚೈಸಿಗಳು ಪ್ರಯೋಜಿತ ರೂಪದಲ್ಲಿ ಭಾರೀ ಮೊತ್ತದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಬಿಸಿಸಿಐ ಈ ಚಿಂತನೆ ನಡೆಸಿದೆ. ಅಲ್ಲದೇ ಟೂರ್ನಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ಕ್ರಿಕೆಟ್ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 20 ಲಕ್ಷ ರೂ. ನೀಡಬೇಕೆಂದು ಬಿಸಿಸಿಐ ತಿಳಿಸಿದೆ. ಪರಿಣಾಮ ಪಂದ್ಯಗಳನ್ನು ಆಯೋಜಿಸುವ ಕ್ರಿಕೆಟ್ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ 1 ಕೋಟಿ ರೂ. ಪಡೆದುಕೊಳ್ಳುತ್ತವೆ.

ಬಿಸಿಸಿಐ ಈ ಹಿಂದೆ 50 ಲಕ್ಷ ರೂ. ಹಾಗೂ ಫ್ರಾಂಚೈಸಿಗಳು 30 ಲಕ್ಷ ರೂ.ಗಳನ್ನು ಕ್ರಿಕೆಟ್ ಸಂಸ್ಥೆಗಳಿಗೆ ನೀಡುತ್ತಿದ್ದವು. ಬಿಸಿಸಿಐ ಹೊಸ ನಿರ್ಧಾರದಿಂದ ಈಗ ತಲಾ 50 ಲಕ್ಷ ರೂ. ನೀಡಲಾಗುತ್ತದೆ. ಮತ್ತೊಂದೆಡೆ ಟೂರ್ನಿಯ ಪ್ಲೇ ಆಫ್ ಪಂದ್ಯಗಳವರೆಗಿನ ಲೀಗ್ ಪಂದ್ಯಗಳ ಬಹುತೇಕ ಆದಾಯ ಫ್ರಾಂಚೈಸಿಗಳಿಗೆ ಸಲ್ಲುತ್ತದೆ. ಆದ್ದರಿಂದ ಬಹುಮಾನ ಮೊತ್ತವನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿತಗೊಳಿಸುವ ಚಿಂತನೆಯನ್ನು ಬಿಸಿಸಿಐ ಸಮಿತಿ ಮಾಡಿದೆ ಎನ್ನಲಾಗಿದೆ. ಇತ್ತ ಬಿಸಿಸಿಐ ನಿರ್ಧಾರದ ಕುರಿತು ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿ ಚರ್ಚೆಗೆ ಮುಂದಾಗಿವೆ. ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಕೂಡ ಬಿಸಿಸಿಐ ಕೈಬಿಟ್ಟಿದನ್ನು ಇಲ್ಲಿ ನೆನೆಯಬಹುದಾಗಿದೆ.

Comments

Leave a Reply

Your email address will not be published. Required fields are marked *