ಇಂದಿನಿಂದ ವಿಶ್ವವಿಖ್ಯಾತ ಹಂಪಿ ಉತ್ಸವ ಆರಂಭ- ಹಂಪಿ ಬೈ ಸ್ಕೈ ಪ್ರಮುಖ ಆಕರ್ಷಣೆ

ಬಳ್ಳಾರಿ: ಧ್ವನಿ ಬೆಳಕಿನಲ್ಲಿ ಮಿಂದೇಳಲು ಹಂಪಿ ಸಿದ್ಧವಾಗಿದ್ದು, ಇಂದಿನಿಂದ ಮೂರು ದಿನ ಕಾಲ ನಡೆಯಲಿರುವ ವಿಶ್ವ ವಿಖ್ಯಾತ ಹಂಪಿ ಉತ್ಸವ ಆರಂಭವಾಗಲಿದೆ.

ಸಿಎಂ ಸಿದ್ದರಾಮಯ್ಯ ಅವರು ಸಂಜೆ 6 ಗಂಟೆಗೆ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಒಟ್ಟು 11 ವೇದಿಕೆಗಳಲ್ಲಿ 450 ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಕಾರ್ಯಕ್ರಮವನ್ನು ನೀಡಲಿದ್ದಾರೆ. ಗಾಯಕರಾದ ಗುರುಕಿರಣ್, ಕುನಾಲ್ ಗಾಂಜಾವಾಲ, ಶಾನ್ ಸೇರಿದಂತೆ ಇತರೆ ಕಲಾವಿದರು ಸಂಗೀತ ಕಾರ್ಯಕ್ರಮ ನೀಡುತ್ತಾರೆ.

ಹಂಪಿಯ ಎಲ್ಲಾ ಸ್ಮಾರಕಗಳಿಗೆ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಹೊಸಪೇಟೆ- ಗಂಗಾವತಿ ಮುಖ್ಯರಸ್ತೆಗೆ ಡಾಂಬರು ಹಾಕಲಾಗಿದೆ. ನಗರದಿಂದ ಹಂಪಿವರೆಗೆ ರಸ್ತೆಯ ಎರಡೂ ಬದಿ ಕಟೌಟ್, ಫ್ಲೆಕ್ಸ್‍ಗಳು ರಾರಾಜಿಸುತ್ತಿವೆ. ಇಡೀ ಹಂಪಿ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

ಮೂರು ದಿನಗಳ ಈ ಉತ್ಸವದಲ್ಲಿ ಈ ಬಾರಿ ಹಂಪಿ ಬೈ ಸ್ಕೈ ಪ್ರಮುಖ ಆಕರ್ಷಣೆಯಾಗಿದೆ. ಏರಿಯಲ್ ವ್ಯೂವ್‍ನಲ್ಲಿ ಹಂಪಿ ಸ್ಮಾರಕಗಳು, ದೇವಾಲಯಗಳು, ತುಂಗಭದ್ರಾ ಜಲಾಶಯವನ್ನು ನೋಡಲು ಪ್ರವಾಸಿಗರಿಗೆ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ಸುಮಾರು 2300 ರೂಪಾಯಿ ತೆರಬೇಕಿದೆ. ಆಗಸದಿಂದ ಹಂಪಿ ಹೇಗೆ ಕಾಣುತ್ತದೆ ಎಂಬುದನ್ನು ನೋಡಬಹುದಾಗಿದೆ.

ಹಂಪಿ ಉತ್ಸವದ ಅಂಗವಾಗಿ ಗುರುವಾರ ಹೊಸಪೇಟೆಯಲ್ಲಿ ಮೊದಲ ಬಾರಿಗೆ ಬಂಡಿ ಉತ್ಸವ ನಡೆಯಿತು. ಹೊಸಪೇಟೆ ತಾಲೂಕಿನ ರೈತರು ತಮ್ಮ ತಮ್ಮ ಬಂಡಿ ಎತ್ತುಗಳನ್ನು ಶೃಂಗರಿಸಿ ಬಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಹೊಸಪೇಟೆಯಿಂದ ಹಂಪಿ ಕಮಲಮಹಲ್‍ವರೆಗೆ ನಡೆದ ಬಂಡಿ ಉತ್ಸವಕ್ಕೆ ಶಾಸಕ ಆನಂದ ಸಿಂಗ್ ಚಾಲನೆ ನೀಡಿದ್ದರು. ಸ್ವತಃ ಶಾಸಕ ಆನಂದ ಸಿಂಗ್ ಹಾಗೂ ಡಿಸಿ ರಾಮಪ್ರಶಾಂತ್ ಮನೋಹರ್ ಬಂಡಿ ಓಡಿಸಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *