27 ರನ್‌ ಅಂತರದಲ್ಲಿ 5 ವಿಕೆಟ್‌ ಉಡೀಸ್‌, ಇಂಗ್ಲೆಂಡ್‌ಗೆ ಹೀನಾಯ ಸೋಲು – ಲಂಕಾಗೆ 8 ವಿಕೆಟ್‌ಗಳ ಜಯ

ಬೆಂಗಳೂರು: ಸಂಘಟಿತ ಬೌಲಿಂಗ್‌ ಹಾಗೂ ಪಾಥುಮ್‌ ನಿಸ್ಸಾಂಕ (Pathum Nissanka) ಭರ್ಜರಿ ಬ್ಯಾಟಿಂಗ್‌ನಿಂದ ಶ್ರೀಲಂಕಾ ತಂಡವು, ಇಂಗ್ಲೆಂಡ್‌ (England) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.

5 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದ್ದ ಪಾಕಿಸ್ತಾನ (Pakistan) ತಂಡವು 4 ಅಂಕ, -0.400 ರನ್‌ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿತ್ತು. ಆದ್ರೆ ಆಂಗ್ಲರ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಲಂಕಾ (Sri Lanka) 4 ಅಂಕ, -0.205 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದು, ಪಾಕ್‌ ತಂಡವನ್ನು ಹಿಂದಿಕ್ಕಿದೆ. ಇದನ್ನೂ ಓದಿ: 2036ರ ಜಾಗತಿಕ ಕ್ರೀಡಾಹಬ್ಬಕ್ಕೆ ಭಾರತ ತಯಾರಿ ಶುರು – ಮುಂದಿರುವ ಸವಾಲುಗಳೇನು?

ಬ್ಯಾಟಿಂಗ್‌ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 33.2 ಓವರ್‌ಗಳಲ್ಲೇ 156 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವು 25.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ ಎಂದು ಮ್ಯಾಕ್ಸ್‌ವೆಲ್‌ ಕೆಂಡ

ಚೇಸಿಂಗ್‌ ಆರಂಭಿಸಿದ್ದ ಲಂಕಾ ತಂಡವೂ ಸಹ 9 ರನ್‌ಗಳಿಗೆ ಮೊದಲ ವಿಕೆಟ್‌, 23 ರನ್‌ಗಳಿಗೆ 2ನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಜೊತೆಯಾದ ನಿಸ್ಸಾಂಕ ಹಾಗೂ ಸದೀರ ಸಮರವಿಕ್ರಮ ಜೋಡಿ ಮುರಿಯದ 3ನೇ ವಿಕೆಟ್‌ಗೆ 122 ಎಸೆತಗಳಲ್ಲಿ 137 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಪಾಥುಮ್‌ ನಿಸ್ಸಾಂಕ 83 ಎಸೆತಗಳಲ್ಲಿ ಅಜೇಯ 77 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರೆ, ಸಮರವಿಕ್ರಮ 54 ಎಸೆತಗಳಲ್ಲಿ 65 ರನ್‌ (7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಮಿಂಚಿದರು. ಇಂಗ್ಲೆಂಡ್‌ ಪರ ಡೇವಿಡ್ ವಿಲ್ಲಿ 2 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡ ಲಂಕಾ ಬೌಲರ್‌ಗಳ ದಾಳಿಗೆ ಕಂಗಾಲಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳು ಸಿಂಹಳಿಯರ ದಾಳಿಗೆ ತರಗೆಲೆಗಳಂತೆ ಉದುರಿದರು. 16 ಓವರ್‌ಗಳಲ್ಲಿ 80 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಬಳಿಕ ಬೆನ್‌ಸ್ಟೋಕ್ಸ್‌ (Ben Stokes) ಬ್ಯಾಟಿಂಗ್‌ ನೆರವಿನಿಂದ ಚೇತರಿಸಿಕೊಳ್ಳುತ್ತಿತ್ತು. 119 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಕೊನೆಯ 27 ರನ್‌ಗಳ ಅಂತರದಲ್ಲೇ ಉಳಿದ 5 ವಿಕೆಟ್‌ಗಳನ್ನೂ ಕಳೆದುಕೊಂಡು 156 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್ – ಮೂಡಿಗೆರೆಯ ಯುವತಿಗೆ ಚಿನ್ನ, ಗ್ರಾಮಸ್ಥರಿಂದ ಸಿಹಿ ಹಂಚಿ ಸಂಭ್ರಮ

ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 30 ರನ್‌, ಡೇವಿಡ್‌ ಮಲಾಬ್‌ 28 ರನ್‌ ಹಾಗೂ ಬೆನ್‌ಸ್ಟೋಕ್ಸ್‌ 43 ರನ್‌ ಗಳಿಸಿದ್ರೆ ಉಳಿದವರು ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಲಂಕಾ ಪರ ಲಹಿರು ಕುಮಾರ 3 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಏಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್‌ ಹಾಗೂ ಮಹೇಶ್ ತೀಕ್ಷಣ 1 ವಿಕೆಟ್‌ ಪಡೆದು ಮಿಂಚಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]