ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಹೊರಕ್ಕೆ

ಲಂಡನ್: ಬುಧವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಕೆಲ ಪ್ರೇಕ್ಷಕರನ್ನು ಮ್ಯಾಂಚೆಸ್ಟರ್ ಪೊಲೀಸರು ಮೈದಾನದಿಂದ ಹೊರ ಹಾಕಿದ್ದಾರೆ.

ಹೊರಹಾಕಲಾದ ಎಲ್ಲ ಪ್ರೇಕ್ಷಕರು ಯುವಕರಗಿದ್ದು, ಸಿಖ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇವರು ತಮ್ಮ ಟೀ ಶರ್ಟ್ ಮೇಲೆ ಸಿಖ್‍ರಿಗೆ ಪ್ರತ್ಯೇಕ ರಾಜ್ಯಬೇಕು ಎಂಬ ಸಂದೇಶವಿರುವ ಬಟ್ಟೆ ಹಾಕಿದ್ದರು. ಕ್ರೀಡಾಂಗಣದಲ್ಲಿ ಈ ರೀತಿಯ ಸಂದೇಶವಿರುವ ಬಟ್ಟೆ ಧರಿಸಲು ಅನುಮತಿ ಇಲ್ಲದ ಕಾರಣ ಅವರನ್ನು ಹೊರಹಾಕಲಾಗಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಯೊಬ್ಬರು “4 ಜನ ಸಿಖ್ ಧರ್ಮದ ಯುವಕರು ರಾಜಕೀಯ ಸಂದೇಶವಿರುವ ಟೀ ಶರ್ಟ್‍ಗಳನ್ನು ಧರಿಸಿ ಮೈದಾನಕ್ಕೆ ಬಂದಿದ್ದರು. ಇದಕ್ಕೆ ಅನುಮತಿ ಇಲ್ಲದ ಕಾರಣ ಮೈದಾನದ ಸಿಬ್ಬಂದಿ ಅವರನ್ನು ಕರೆದುಕೊಂದು ಬಂದು ನಮಗೆ ಒಪ್ಪಿಸಿದ್ದಾರೆ” ಎಂದು ಹೇಳಿದ್ದಾರೆ.

ಈ ರೀತಿಯ ಘಟನೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆಯೂ ನಡೆದಿದ್ದು “ಜಸ್ಟಿಸ್ ಫಾರ್ ಬಲೂಚಿಸ್ತಾನ” ಎನ್ನುವ ಬ್ಯಾನರ್ ಹೊತ್ತುಕೊಂಡು ವಿಮಾನವೊಂದು ಹಾರಿತ್ತು. ಇದಾದ ಬೆನ್ನಲ್ಲೇ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಆ ವಿಮಾನವು ಪಾಕಿಸ್ತಾನದ ಮೂಲದವರೇ ಹೆಚ್ಚಿರುವ ಬ್ರಾಡ್‍ಫೋರ್ಡ್ ಏರ್ಪೋರ್ಟ್‍ನಿಂದ ಹಾರಿತ್ತು ಎಂದು ಸ್ಥಳೀಯ ತನಿಖಾ ತಂಡ ನಡೆಸಿದ ತನಿಖೆಯಿಂದ ತಿಳಿದು ಬಂದಿತ್ತು.

ಈ ಘಟನೆ ನಡೆದು 10 ದಿನಗಳ ಬಳಿಕ ಆದರೆ ಶ್ರೀಲಂಕಾ ಮತ್ತು ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಮೈದಾನದ ಮೇಲೆ ಹಾರಾಡಿದ ವಿಮಾನದ ಬ್ಯಾನರ್ ಗಮನ ಸೆಳೆದಿತ್ತು. ಜಸ್ಟೀಸ್ ಫಾರ್ ಕಾಶ್ಮೀರ್ ಎಂದು ಅದರಲ್ಲಿ ಬರೆಯಲಾಗಿತ್ತು. ಅದಾದ ಅರ್ಧ ಗಂಟೆ ನಂತರ ಹಾರಿದ ಇನ್ನೊಂದು ಅದೇ ರೀತಿಯ ವಿಮಾನದಲ್ಲಿ ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎಂಬ ಬ್ಯಾನರ್ ಹೊತ್ತುಕೊಂಡು ಹಾರಿ ಹೋಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಐಸಿಸಿಗೆ ಪತ್ರ ಬರೆದು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಭದ್ರತೆಯನ್ನು ನೀಡಿ, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ತಿಳಿಸಿತ್ತು. ಅಲ್ಲದೆ ಈ ವಿಚಾರದ ಬಗ್ಗೆ ಸರಿಯಾಗಿ ತನಿಖೆಯನ್ನು ಮಾಡಬೇಕು. ಈ ರೀತಿಯ ಘಟನೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಸೆಮಿಫೈನಲ್‍ನಲ್ಲಿ ಮತ್ತೆ ಈ ರೀತಿಯ ಪ್ರಸಂಗಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಐಸಿಸಿಗೆ ತಿಳಿಸಿತ್ತು. ಬಿಸಿಸಿಐ ಖಾರವಾದ ಪತ್ರ ಬರೆದ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ವೋಲ್ಡ್ ಟ್ರಾಫರ್ಡ್ ವಾಯುಸೀಮೆಯನ್ನು ಬಂದ್ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *