ಪಾಕಿಗೆ ಮತ್ತೆ ಶಾಕ್‌, ಹಿಂದೆ ಸರಿದ ಟೀಂ ಇಂಡಿಯಾ – ಇಂದಿನ ಪಂದ್ಯವೇ ರದ್ದು

ಬರ್ಮಿಂಗ್‌ಹ್ಯಾಮ್‌: ಭಾರತದ ಆಟಗಾರರು ಹಿಂದೆ ಸರಿದ ಬೆನ್ನಲ್ಲೇ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 (World Championship of Legends) ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ನಡೆಯಬೇಕಿದ್ದ ಭಾರತ-ಪಾಕಿಸ್ತಾನ (India Pakistan) ಕ್ರಿಕೆಟ್‌ ಪಂದ್ಯ ರದ್ದಾಗಿದೆ.

ಇಂದಿನ ಪಂದ್ಯದ ಬಗ್ಗೆ ಭಾರತದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ ಟೀಂ ಇಂಡಿಯಾ (Team India) ಪಂದ್ಯ ಆಡದೇ ಇರಲು ನಿರ್ಧರಿಸಿದೆ. ಪಹಲ್ಗಾಮ್‌ ದಾಳಿ, ಆಪರೇಷನ್‌ ಸಿಂಧೂರ ವಿಚಾರವನ್ನು ಪ್ರಸ್ತಾಪಿಸಿ ಪಾಕ್‌ ಜೊತೆ ಆಡುವ ಅಗತ್ಯ ಏನು ಎಂದು ಪ್ರಶ್ನಿಸಿ ಟೀಕಿಸುತ್ತಿದ್ದರು.

 

 

 

ಈ ಸಂಬಂಧ ಎಜ್‌ಬಾಸ್ಟನ್‌ ಸ್ಟೇಡಿಯಂ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಆಯೋಜಕರು ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಿದ್ದಾರೆ. ಕ್ರೀಡಾಂಗಣ ಮುಚ್ಚಲಾಗಿರುವುದರಿಂದ ದಯವಿಟ್ಟು ಹಾಜರಾಗಬೇಡಿ. ಟಿಕೆಟ್‌ ಖರೀದಿಸಿದ ಎಲ್ಲಾ ಪ್ರೇಕ್ಷಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: BCCI ಅಕೌಂಟ್‌ನಲ್ಲಿದೆ 30,000 ಕೋಟಿ ಹಣ – IPLನಿಂದಲೇ ಅತೀ ಹೆಚ್ಚು ಗಳಿಕೆ!

ಈ ಟೂರ್ನಿಯಲ್ಲಿ ಟೂರ್ನಿಯಲ್ಲಿ ಟೀಂ ಇಂಡಿಯಾದ (Team India) ಸದಸ್ಯರು ಆಡುತ್ತಿಲ್ಲ. ಬದಲಾಗಿ ಟೀ ಇಂಡಿಯಾಗೆ ನಿವೃತ್ತಿ ಹೇಳಿದ ಹಿರಿಯ ಆಟಗಾರರು ಆಡುತ್ತಿದ್ದಾರೆ.  ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಎರಡನೇ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಭಾರತ ತಂಡವನ್ನು, ಯೂನಿಸ್ ಖಾನ್ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆರಂಭಗೊಂಡಿತ್ತು. ಫೈನಲಿನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ 5 ವಿಕೆಟ್‌ ಜಯ ಸಾಧಿಸಿ ಕಪ್‌ ಗೆದ್ದಿತ್ತು. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ನ ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ.

ಭಾರತ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಯೂಸುಫ್ ಪಠಾಣ್, ನಮನ್ ಓಜಾ, ಮುನಾಫ್ ಪಟೇಲ್, ರಿತಿಂದರ್ ಸಿಂಗ್ ಸೋಧಿ, ಆರ್‌ಪಿ ಸಿಂಗ್, ಅಶೋಕ್ ದಿಂಡಾ.

ಪಾಕಿಸ್ತಾನ ಚಾಂಪಿಯನ್ಸ್ ತಂಡ: ಯೂನಿಸ್ ಖಾನ್ (ನಾಯಕ), ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್, ಮಿಸ್ಬಾ-ಉಲ್-ಹಕ್, ಇಮ್ರಾನ್ ನಜೀರ್, ಮೊಹಮ್ಮದ್ ಹಫೀಜ್, ಕಮ್ರಾನ್ ಅಕ್ಮಲ್, ಸಲ್ಮಾನ್ ಬಟ್, ಅಬ್ದುಲ್ ರಜಾಕ್, ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್, ಯಾಸಿರ್ ಅರಾಫತ್, ಸೊಹೈಲ್ ತನ್ವೀರ್, ಸಯೀದ್ ಅಜ್ಮಲ್, ಉಮರ್ ಗುಲ್.