ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ- ರಾಹುಲ್ ಗಾಂಧಿ

ನವದೆಹಲಿ: ಇಸ್ರೋ ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ ಎಂದು ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭಾರತ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿದ್ದ ಚಂದ್ರಯಾನ -2 ಯೋಜನೆ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಆದರೆ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಂಪರ್ಕ ಕಡಿತಗೊಂಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ನಮ್ಮ ವಿಜ್ಞಾನಿಗಳ ಸಾಧನೆ ಪ್ರತಿಯೊಬ್ಬ ಭಾರತಿಯರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

ಚಂದ್ರಯಾನ-2 ಮೂನ್ ಮಿಷನ್‍ನಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕಾಗಿ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ನಿಮ್ಮ ಈ ಸಾಧನೆ ಭಾರತೀಯ ವೈಜ್ಞಾನಿಕ ಹಾದಿಗೆ ಮತ್ತು ಮುಂದಿನ ಭಾರತ ಕಾರ್ಯಚರಣೆಗೆ ಅಡಿಪಾಯವನ್ನು ಹಾಕಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಕಾಂಗ್ರೆಸ್ ಪಕ್ಷವು ಕೂಡ ಟ್ವೀಟ್ ಮಾಡಿದ್ದು, ಈ ಉದ್ವಿಗ್ನ ಸಮಯದಲ್ಲಿ ರಾಷ್ಟ್ರವು ಇಸ್ರೋದ ಸಂಪೂರ್ಣ ತಂಡ ಜೊತೆ ನಿಂತಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದೆ.

ತಡ ರಾತ್ರಿ ವಿಕ್ರಮ್ ಲ್ಯಾಂಡ್ ಆಗುವ ಪ್ರಕ್ರಿಯೆ ಸರಿಯಾಗಿ ಆರಂಭಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸೂಚನೆಯೂ ಲಭಿಸಿತು. ಆದರೆ ಲ್ಯಾಂಡರಿನಿಂದ ಪಥ ಬದಲಾದ ಕಾರಣ ಇಸ್ರೋ ಕೇಂದ್ರಕ್ಕೆ ಬರಬೇಕಾದ ಸಂದೇಶ ತಡವಾಗಿತ್ತು. ಚಂದ್ರನನ್ನು ತಲುಪಲು 2.1ಕಿಮೀ ದೂರ ಇದ್ದ ಸಂದರ್ಭದಲ್ಲಿ ಲ್ಯಾಂಡರಿನಿಂದ ಸಿಗ್ನಲ್ ಲಭಿಸಲಿಲ್ಲ. ಪರಿಣಾಮ ಇಸ್ರೋ ಅಧಿಕಾರಿಗಳ ಮುಖದಲ್ಲಿ ಆತಂಕ ಟೆನ್ಷನ್ ಕಂಡು ಬಂದಿತ್ತು.

ಈ ವಿಚಾರದ ಬಗ್ಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು, 2.1 ಕಿ.ಮೀ ಅಂತರದಲ್ಲಿ ಸಿಗ್ನಲ್ ಕಡಿತಗೊಂಡಿದೆ. ಲ್ಯಾಂಡರ್ ಸಿಗ್ನಲ್ ಪಡೆಯಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಬಹುಬೇಗ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *