2019ರ ವಿಶ್ವಕಪ್ ಗೆದ್ದರೆ ಕೊಹ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾರೆ: ಸೌರವ್ ಗಂಗೂಲಿ

ಕೋಲ್ಕತ್ತಾ: ಟೀಂ ಇಂಡಿಯಾ ಮುಂಬರುವ 2019ರ ವಿಶ್ವಕಪ್ ಕಪ್ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ತಮ್ಮ ಶರ್ಟ್ ಬಿಚ್ಚಿ ಇಂಗ್ಲೆಂಡ್ ನ ಆಕ್ಸ್ ಫರ್ಡ್ ಬೀದಿಗಳಲ್ಲಿ ಕಪ್ ಹಿಡಿದು ಸಂಭ್ರಮಿಸುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಭಾರತದ ಇತಿಹಾಸ ತಜ್ಞ ಬೋರಿಯಾ ಮಜುಂದಾರ್ ಅವರ `ಎಲೆವೆನ್ ಗಾಡ್ಸ್ ಅಂಡ್ ಎ ಬಿಲಿಯನ್ ಇಂಡಿಯನ್ಸ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೊಹ್ಲಿಯೊಂದಿಗೆ ಭಾಗವಹಿಸಿದ ವೇಳೆ ಸೌರವ್ ಈ ಮಾತು ಹೇಳಿದ್ದಾರೆ.

ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಇಂಗ್ಲೆಂಡ್ ನಲ್ಲಿ ನಾಟ್ ವೆಸ್ಟ್ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯ ಗೆದ್ದ ವೇಳೆ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದರು. ಈ ಘಟನೆಯನ್ನು ಕಾರ್ಯಕ್ರಮದ ವೇಳೆ ನೆನಪಿಸಿಕೊಂಡ ಗಂಗೂಲಿ, ಮುಂದಿನ 2019 ರ ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಾರೆ. ಕ್ಯಾಮೆರಾಗಳಿಗೆ ಕೊಹ್ಲಿ ಅವರ ಸಿಕ್ಸ್ ಪ್ಯಾಕ್ ಕಾಣಲಿದೆ ಎಂದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಕೊಹ್ಲಿ, ಗಂಗೂಲಿ ಮಾತಿಗೆ ಸಮ್ಮತಿಸಿದರು.

ಮುಂಬರುವ ಇಂಗೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲೂ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದರು.

ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಏಕೆ?
2002 ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ 3-3 ಸಮಬಲದೊಂದಿಗೆ ಮುಕ್ತಾಯಗೊಂಡಿತ್ತು. ಮುಂಬೈನಲ್ಲಿ ನಡೆದ 6ನೇ ಪಂದ್ಯದಲ್ಲಿ ಭಾರತ ಕೊನೆಯ 6 ಎಸೆತದಲ್ಲಿ 2 ವಿಕೆಟ್ ಗಳ ಸಹಾಯದಿಂದ 11 ರನ್ ಗಳನ್ನು ಗಳಿಸಬೇಕಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್ ನಲ್ಲಿ ಭಾರತ ಎಲ್ಲ ವಿಕೆಟ್ ಕಳೆದುಕೊಂಡು 250 ರನ್‍ಗಳಿಗೆ ಆಲೌಟ್ ಆಗಿತ್ತು. 5 ರನ್ ಗಳಿಂದ ಪಂದ್ಯ ಜಯಿಸಿದ್ದನ್ನು ಕಂಡ ಫ್ಲಿಂಟಾಫ್ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.

ಈ ಸರಣಿಯ ನಂತರ ನಾಟ್‍ವೆಸ್ಟ್ ಸರಣಿಯಲ್ಲಿ ಪಾಲ್ಗೊಂಡಲು ಟೀಂ ಇಂಡಿಯಾ ಇಂಗ್ಲೆಂಡಿಗೆ ಪ್ರಯಾಣಿಸಿತ್ತು. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸೋಲುವತ್ತ ಮುಖಮಾಡಿತ್ತು. 325 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 146 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಮೊಹಮ್ಮದ್ ಕೈಫ್ ಮತ್ತು ಯುವರಾಜ್ 7ನೇ ವಿಕೆಟ್‍ಗೆ 121 ರನ್ ಜೊತೆಯಾಟವಾಡಿ ಭಾರತಕ್ಕೆ ಗೆಲುವವನ್ನು ತಂದುಕೊಟಿದ್ದರು. ಕೈಫ್ ಔಟಾಗದೇ 87 ರನ್ ಹೊಡೆದಿದ್ದರೆ ಯುವರಾಜ್ 69 ರನ್ ಹೊಡೆದಿದ್ದರು. ಅಂತಿಮವಾಗಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ ಭಾರತ ಪಂದ್ಯವನ್ನು ಗೆದ್ದಿತ್ತು. ಭಾರತ ಜಯಗಳಿಸಿದ್ದನ್ನು ಕಂಡು ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂತಸ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *