4 ಓವರ್‌ನಲ್ಲಿ 19 ರನ್ ನೀಡಿ 4 ವಿಕೆಟ್ ಕಿತ್ತ ಪೂನಂ- 17 ರನ್‍ಗಳಿಂದ ಸೋತ ಆಸೀಸ್

– ಸತತ ಮೂರನೇ ಬಾರಿಗೆ ಮೊದಲ ಪಂದ್ಯದಲ್ಲಿ ಗೆದ್ದ ಭಾರತ

ಸಿಡ್ನಿ: ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತವು ಸತತ ಮೂರನೇ ಬಾರಿಗೆ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.

ಸಿಡ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಭಾರತವು 2018ರ ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 34 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಕೌರ್ 103 ರನ್ (51 ಎಸೆತ, 7 ಬೌಂಡರಿ, 8 ಸಿಕ್ಸರ್) ದಾಖಲಿಸಿದ್ದರು.

2016ರ ಮಹಿಳಾ ವಿಶ್ವಕಪ್‍ನಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 72 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ 42 ರನ್ ಹಾಗೂ ಹರ್ಮನ್‍ಪ್ರೀತ್ ಕೌರ್ 40 ರನ್ ಗಳಿಸಿದ್ದರು. ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಜಯವನ್ನು ಭಾರತ ತಂಡ ದಾಖಲಿಸಿದೆ. 2018ರಲ್ಲಿ ಭಾರತದ ಮಹಿಳಾ ತಂಡವು ಆಸೀಸ್ ಪಡೆಯನ್ನು ಸೋಲಿಸಿತ್ತು.

ಇಂದಿನ ಪಂದ್ಯದಲ್ಲಿ ಪೂನಂ ಯಾದವ್ ಭಾರತ ಪರ ಗರಿಷ್ಠ 4 ವಿಕೆಟ್ ಪಡೆದು ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಶಿಖಾ ಪಾಂಡೆ 3 ವಿಕೆಟ್, ರಾಜೇಶ್ವರಿ ಗೈಕ್ವಾಡ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ಭಾರತದ ಆರಂಭಿಕ ಆಟಗಾರರಾದ ಸ್ಮೃತಿ ಮಂದನಾ ಹಾಗೂ ಶೆಫಾಲಿ ವರ್ಮಾ ಜೋಡಿಯನ್ನು ಮುರಿಯಲು ಪರದಾಡಿತು. ಈ ಜೋಡಿಯು ಮೊದಲ ವಿಕೆಟ್‍ಗೆ 41 ರನ್ ಕೊಡುಗೆ ನೀಡಿತು. ಮಂದನಾ ವಿಕೆಟ್ ಬೆನ್ನಲ್ಲೇ 6 ರನ್‍ಗಳಿಗೆ ಭಾರತ ಮತ್ತೆರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆಗ ದೀಪ್ತಿ ಶರ್ಮಾ ಏಕಾಂಗಿಯಾಗಿ ಹೋರಾಡಿ ಔಟಾಗದೆ 49 ರನ್ ಹಾಗೂ ಕೃಷ್ಣಮೂರ್ತಿ ಅಜೇಯ 9 ರನ್ ಗಳಿಸಿದರು. ಇದರಿಂದಾಗಿ ಭಾರತವು 20 ಓವರ್‍ಗಳಲ್ಲಿ 4 ವಿಕೆಟ್‍ಗಳ ನಷ್ಟಕ್ಕೆ 132 ರನ್ ಗಳಿಸಿತ್ತು.

ಭಾರತ ನೀಡಿದ್ದ 133 ರನ್‍ಗಳ ಗುರಿ ಬೆನ್ನಟ್ಟಿದ ಆಸೀಸ್ ತಂಡ ಪರ ಅಲಿಸಾ ಹಿಲ್ಲಿ 51 ರನ್ ಹಾಗೂ ಆಶ್ಲೇ ಗಾಡ್ರ್ನರ್ 34 ರನ್ ಮಾತ್ರ ಎರಡಂಕಿ ರನ್ ಗಳಿಸಿದರು. ಉಳಿದ ಎಲ್ಲಾ ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಒಂದು ಎಸೆತ ಬಾಕಿ ಇರುವಂತೆ ಆಸೀಸ್ ಪಡೆ ಎಲ್ಲಾ ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ ಸೋಲಿಗೆ ತುತ್ತಾಯಿತು.

ಚಾಂಪಿಯನ್ ಪಟ್ಟ ಏರದ ಭಾರತ:
ಇದುವರೆಗೆ 6 ಬಾರಿ ಮಹಿಳಾ ಟಿ20 ವಿಶ್ವಕಪ್ ನಡೆದಿದೆ. ಈ ಪೈಕಿ ಭಾರತವು ಒಂದು ಬಾರಿಯೂ ಫೈನಲ್‍ಗೆ ತಲುಪಿಲ್ಲ. ಆದರೆ ಆಸ್ಟ್ರೇಲಿಯಾ 4 ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಕೊನೆಯ ಬಾರಿ ಆಸ್ಟ್ರೇಲಿಯಾ ಫೈನಲ್‍ನಲ್ಲಿ ಇಂಗ್ಲೆಂಡ್‍ನ್ನು 8 ವಿಕೆಟ್‍ಗಳಿಂದ ಸೋಲಿಸಿತ್ತು. ಭಾರತ 3 ಬಾರಿ (2009, 2010, 2018) ಸೆಮಿಫೈನಲ್ ತಲುಪಿದೆ. ಸೆಮಿಫೈನಲ್‍ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

Comments

Leave a Reply

Your email address will not be published. Required fields are marked *