ಕೊರೊನಾ ವಾರಿಯರ್ಸ್‍ಗಾಗಿ ಪಿಪಿಇ ಕಿಟ್, ಮಾಸ್ಕ್ ತಯಾರಿಸ್ತಿದ್ದಾರೆ ಮಹಿಳೆಯರು

ಬೆಂಗಳೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ ಮಹಿಳೆಯರೆಲ್ಲಾ ಸೇರಿ ಕೌಶಲ್ಯ ಪಡೆದು ಇಡೀ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಿ, ಮಾರಾಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗೆ ಅಗತ್ಯವಾದ ಪಿಪಿಇ ಕಿಟ್ ತಯಾರಿಸಿ ನೆರವಾಗುತ್ತಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪ ಬ್ಲಾಕ್ ಸ್ತ್ರೀ ಶಕ್ತಿ ಸೊಸೈಟಿ ಅಡಿಯಲ್ಲಿ ಮಹಿಳೆಯರು ಕೋವಿಡ್ 19 ವಾರಿಯರ್ಸ್‍ಗೆ ತಮ್ಮ ಅಳಿಲು ಸೇವೆ ಮಾಡಿ, ಕೊರೊನಾ ಸಂದರ್ಭದಲ್ಲಿ ನೆರವಾಗಿ ಸಾರ್ಥಕತೆ ಮೆರೆಯುತ್ತಿದ್ದಾರೆ.

ಈ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಿಕೊಂಡು, ಕೌಶಲ್ಯ ತರಬೇತಿಯಲ್ಲಿ ಪಾಲ್ಗೊಂಡು, ವಿದ್ಯುತ್ ಚಾಲಿತ ಹೋಲಿಗೆ ಯಂತ್ರಗಳಲ್ಲಿ ಕೆಲಸ ಮಾಡುವ ವಿಧಾನ ಕಲಿತಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಪೊಲೀಸರು, ಬೆಂಗಳೂರು ಹಾಲು ಒಕ್ಕೂಟಕ್ಕೆ ಅಗತ್ಯವಿರುವ ಮುಖಕವಚ, ಮಾಸ್ಕ್, ಪಿಪಿಇ ಕಿಟ್‍ಗಳ ಸಾಮಾಗ್ರಿಗಳಾದ ಕೋಟ್, ಗ್ಲೌಸ್, ಕಾಲು ಚೀಲ, ದೇಹ ರಕ್ಷಕಗಳನ್ನು ಹೊಲಿಗೆ ಮಾಡಿ ದೇಶ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಕಡಿಮೆ ಬೆಲೆಯಲ್ಲಿ ಮಾಸ್ಕ್, ಸರ್ಜಿಕಲ್ ಮಾಸ್ಕ್, ಇನ್ನಿತರೆ ವಸ್ತುಗಳನ್ನು ಹೋಲಿಯುತ್ತಿದ್ದು, ಲಾಕ್‍ಡೌನ್ ವೇಳೆಯಲ್ಲಿ ಸ್ವಾವಲಂಬಿಯಾಗುತ್ತಿದ್ದಾರೆ. ಸುಮಾರು 30ರಿಂದ 40 ಮಹಿಳೆಯರು ದಿನನಿತ್ಯ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಡ ಕುಟುಂಬದಿಂದ ಬಂದಂತಹ ಮಹಿಳೆಯರ ಸ್ವಾವಲಂಬಿಗಳಾಗಿ ಮಾಸ್ಕ್, ಮತ್ತು ಪಿಪಿಇ ಕಿಡ್ ತಯಾರಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಚಿಕ್ಕಬಾಣಾವರ ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯಾಧ್ಯಕ್ಷೆ ಭಾಗ್ಯಮ್ಮ ಅವರು ಮಾತನಾಡಿ, ಇವರೇಲ್ಲರಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಗತ್ಯ ತರಬೇತಿ ನೀಡಿದ್ದು, ಈ ಮಹಿಳೆಯರು ದಾಸರಹಳ್ಳಿ, ಪೀಣ್ಯ ಪೊಲೀಸ್ ಠಾಣೆಗೂ ರಿಯಾಯಿತಿ ದರದಲ್ಲಿ ಮಾಸ್ಕ್ ನೀಡುತ್ತಿದ್ದಾರೆ. ಕೆಲಸಕ್ಕೆ ಆದ್ಯತೆ ನೀಡಿ, ತರಬೇತಿ ಕೊಡಿಸಿ ನಮ್ಮಲ್ಲೇ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

Comments

Leave a Reply

Your email address will not be published. Required fields are marked *