WPL 2023: ಕೌರ್‌ ಭರ್ಜರಿ ಫಿಫ್ಟಿ – ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ಗೆ 143 ರನ್‌ಗಳ ಭರ್ಜರಿ ಜಯ

ಮುಂಬೈ: ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಮಹಿಳಾ ತಂಡವು ಉದ್ಘಾಟನಾ ಪಂದ್ಯದಲ್ಲೇ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 143 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಉದ್ಘಾಟನಾ ಪಂದ್ಯ ಉತ್ತಮ ಆರಂಭ ಪಡೆದುಕೊಂಡಿದ್ದು, ಮೊದಲ ದಿನವೇ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಿತು. ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಮುಂಬೈ ಇಂಡಿಯನ್ಸ್‌ ಪರ 31 ಬೌಂಡರಿ, 6 ಸಿಕ್ಸರ್‌ ದಾಖಲಾಯಿತು. ಇದನ್ನೂ ಓದಿ: CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 207 ರನ್‌ ಬಾರಿಸಿತು. 208 ರನ್‌ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ 64 ರನ್‌ಗಳಿಗೆ ಸರ್ವಪತನ ಕಂಡಿತು.

ಮುಂಬೈ ತಂಡದ ಆರಂಭಿಕರಾದ ಯಸ್ತಿಕಾ ಭಾಟಿಯಾ ವಿಕೆಟ್‌ ಪತನದ ನಂತರ ಹೇಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸ್ಕಿವರ್-ಬ್ರಂಟ್ ಜೋಡಿ 2ನೇ ವಿಕೆಟ್‌ ಜೊತೆಯಾಟಕ್ಕೆ 69 ರನ್‌ ಕಲೆಹಾಕಿತು. ಮ್ಯಾಥ್ಯೂಸ್ 31 ಎಸೆತಗಳಲ್ಲಿ 47 ರನ್‌ (3 ಬೌಂಡರಿ, 4 ಸಿಕ್ಸರ್)‌ ಚಚ್ಚಿದರೆ, ಬ್ರಂಟ್‌ 23 ರನ್‌ (18 ಎಸೆತ, 5 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿದ್ರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 216.67 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿ ಗುಜರಾತ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಭರ್ಜರಿ 65 ರನ್‌ (30 ಎಸೆತ, 14 ಬೌಂಡರಿ) ಸಿಡಿಸಿ ಉದ್ಘಾಟನಾ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆ ಬರೆದರು. ಈ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು.

ನಂತರ ಅಮೆಲಿ ಕೆರ್ ಕೂಡ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ 24 ಎಸೆತಗಳಲ್ಲಿ 45 ರನ್‌ ಚಚ್ಚಿದರು. ಅಂತಿಮವಾಗಿ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್‌ ಪೇರಿಸಿತ್ತು. ಇದನ್ನೂ ಓದಿ: ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇನ್ನು ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಸ್ನೇಹ ರಾಣಾ ಎರಡು ವಿಕೆಟ್ ಪಡೆದರಾದರೂ 4 ಓವರ್‌ಗಳಲ್ಲಿ 43 ರನ್ ನೀಡುವ ಮೂಲಕ ದುಬಾರಿಯಾದರು. ಆಸ್ಟ್ರೇಲಿಯಾ ಆಲ್‌ರೌಂಡರ್‌ ಆಶ್ಲೆ ಗಾರ್ಡ್ನರ್, ತನುಜಾ ಕನ್ವರ್, ಝಾರ್ಜಿಯಾ ವರೆಹಮ್ ತಲಾ ಒಂದೊಂದು ವಿಕೆಟ್ ಪಡೆದರು.

ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಮಹಿಳಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ನಾಯಕಿ ಬೆತ್‌ ಮೂನಿ ಮೂರನೇ ಎಸೆತದಲ್ಲೇ ಗಾಯದ ಸಮಸ್ಯೆಯಿಂದ ಹೊರನಡೆದರು. ನಂತರ ಮುಂಬೈ ಬೌಲರ್‌ಗಳ ದಾಳಿಗೆ ಸುಲಭ ತುತ್ತಾದ ಗುಜರಾತ್‌ ಮಹಿಳಾ ಸೈನ್ಯ ಒಂದೊಂದೆ ವಿಕೆಟ್‌ ಕಳೆದುಕೊಂಡಿತು. ದಯಾಳನ್ ಹೇಮಲತಾ 29 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರೂ ಸ್ಥಿರವಾಗಿ ನಿಲ್ಲದೇ ಗುಜರಾತ್‌ ಮೊದಲ ಪಂದ್ಯದಲ್ಲೇ ಸೋಲಿನ ರುಚಿ ಕಂಡಿತು.

ಮುಂಬೈ ಪರ ಸ್ಪಿನ್‌ ದಾಳಿ ನಡೆಸಿದ ಸೈಕಾ ಇಶಾಕ್ 3.1 ಓವರ್‌ಗಳಲ್ಲಿ 11 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ನ್ಯಾಟ್ ಸ್ಕಿವರ್ ಬ್ರಂಟ್ ಮತ್ತು ಅಮೆಲಿ ಕೆರ್ ತಲಾ 2 ವಿಕೆಟ್‌ ಪಡೆದರು, ಇಸ್ಸಿ ವಾಂಗ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Comments

Leave a Reply

Your email address will not be published. Required fields are marked *